ಮಹಿಳೆ ಮೇಲೆ ದೌರ್ಜನ್ಯ: ಹಾಸ್ಟೆಲ್ ಮಾಲೀಕನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಕಲಬುರಗಿ, ಅ.3- ನಗರದ ಹೊರವಲಯದ ಸೈಯದ್ ಚಿಂಚೋಳಿ ಕ್ರಾಸ್‌ನಲ್ಲಿರುವ ಮಹಾದೇವಿ ತಾಯಿ ಶಕ್ತಿ ಸದನ ಗೃಹ ಹಾಸ್ಟೆಲ್‌ನ ಮಾಲೀಕ ಹಾಗೂ ಕಾರ್ಯನಿರ್ವಾಹಕ ಅನಂತರಾಜು ವಿರುದ್ಧ ದೂರುದಾರ ಮಹಿಳೆಗೆ ಲೈಂಗಿಕ ಕಿರುಕುಳ ಹಾಗೂ ಅವಾಚ್ಯವಾಗಿ ನಿಂದಿಸಿದ ಆರೋಪ ಕೇಳಿಬಂದಿದ್ದು, ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಅಹಿಂದ ಜನಸಂಘದ ಶ್ರೀಮತಿ ಜಯಶ್ರೀ ಕಟ್ಟಿಮನಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಫಜಲಪುರ ತಾಲ್ಲೂಕಿನ ಬಳೂರ್ಗಿ ಗ್ರಾಮದ ಶ್ರೀಮತಿ ರೇಣುಕಾ ಗಂಡ ಗುರುಶಾಂತ ಪಾಟೀಲ ಅವರು ಕೌಟುಂಬಿಕ ಕಲಹದಿಂದ ಬೇಸತ್ತು ಹಾಸ್ಟೆಲ್‌ಗೆ ದಾಖಲಾಗಿದ್ದರು. ಅಲ್ಲಿ ಹಾಸ್ಟೆಲ್ ಮಾಲೀಕ ಅನಂತರಾಜು ಅವರು ಅವರಿಗೆ ಕಿರುಕುಳ ನೀಡಿರುವುದಾಗಿ ದೂರು ನೀಡಲಾಗಿದೆ ಎಂದು ತಿಳಿಸಿದರು.
ದೂರುದಾರ ಮಹಿಳೆಯ ಆರೋಪದಂತೆ, ಅನಂತರಾಜು ಅವರು ಅವಾಚ್ಯವಾಗಿ ನಿಂದಿಸುವುದು, ಕೂದಲು ಹಿಡಿದು ಎಳೆದು ಹೊರಗೆ ಹಾಕುವುದು, ಲೈಂಗಿಕ ಉದ್ದೇಶದ ಮಾತುಗಳನ್ನು ಆಡುವುದು ಹಾಗೂ ಬೆದರಿಕೆ ಹಾಕುವುದು ಸೇರಿದಂತೆ ವಿವಿಧ ರೀತಿಯಲ್ಲಿ ಕಿರುಕುಳ ನೀಡಿದ್ದರು ಎನ್ನಲಾಗಿದೆ.
ಈ ಕುರಿತು ಹಾಸ್ಟೆಲ್‌ನ ವಾರ್ಡನ್ ಕಾಶೀಬಾಯಿ ಅವರ ತಂದೆ ಶಾಂತಪ್ಪ ಅವರಿಗೆ ಮಹಿಳೆ ದೂರು ನೀಡಿದ್ದರು. ವಿಷಯ ತಿಳಿದುಕೊಂಡ ಅನಂತರಾಜು ಅವರು ಕಾಶೀಬಾಯಿ ಅವರನ್ನು ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿ ಹಾಸ್ಟೆಲ್‌ನಿಂದ ಹೊರಗೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ ಎಂದು ಜಯಶ್ರೀ ಕಟ್ಟಿಮನಿ ಹೇಳಿದರು.
ಘಟನೆ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತನಿಖೆಗೆ ಯಾವುದೇ ಅಧಿಕಾರಿ ಅಥವಾ ಸಂಸ್ಥೆಯ ವ್ಯಕ್ತಿ ಅಡ್ಡಿಪಡಿಸಿದರೆ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಆರೋಪಗಳು ತನಿಖೆಯಲ್ಲಿ ಸಾಬೀತಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅದೇ ವೇಳೆ ತನಿಖೆಯ ಮೂಲಕ ಆರೋಪಗಳ ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಮಹಿಳೆಯರು ಹಾಗೂ ಬಾಲಕಿಯರ ಸುರಕ್ಷತೆಗಾಗಿ ಕಾರ್ಯನಿರ್ವಹಿಸುವ ಆಶ್ರಯ ಸಂಸ್ಥೆಯೇ ಭಯದ ವಾತಾವರಣಕ್ಕೆ ಕಾರಣವಾಗಬಾರದು. ಇಂತಹ ಸಂಸ್ಥೆಗಳಿಗೆ ನೀಡಲಾಗಿರುವ ಅನುಮತಿ, ಪರವಾನಗಿ ಹಾಗೂ ಸರ್ಕಾರದ ಸೌಲಭ್ಯಗಳನ್ನು ನಿಯಮಾನುಸಾರ ಪರಿಶೀಲಿಸಬೇಕು. ನಿಯಮ ಉಲ್ಲಂಘನೆ ದೃಢಪಟ್ಟಲ್ಲಿ ಸಂಬಂಧಪಟ್ಟ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ದೂರುದಾರ ಮಹಿಳೆಗೆ ನ್ಯಾಯ ದೊರಕಿಸುವುದರ ಜೊತೆಗೆ, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಅನುದಾನಿತ ಸಂಸ್ಥೆಗಳ ಮೇಲ್ವಿಚಾರಣಾ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಜಯಶ್ರೀ ಕಟ್ಟಿಮನಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ದೂರುದಾರ ಶ್ರೀಮತಿ ರೇಣುಕಾ ಗುರುಶಾಂತ ಪಾಟೀಲ, ಶ್ರೀಮತಿ ಶರಣಮ್ಮ, ಕಾಶೀಬಾಯಿ ಅವರ ತಂದೆ ಶಾಂತಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.



