ಜಿಲ್ಲಾಸುದ್ದಿ

ಕನ್ನಡ ಕೃತಿಗಳ ಅಂಕೀಕರಣ ಯೋಜನೆ ಜಾರಿ: ಜಿ.ಎನ್. ನರಸಿಂಹಮೂರ್ತಿ

ಕಲಬುರಗಿ, ಅ.3- ಕನ್ನಡದಲ್ಲಿ ಲಭ್ಯವಿರುವ ಎಲ್ಲ ಕೃತಿಗಳ ಅಂಕೀಕರಣಕ್ಕೆ ಸಂಬಂಧಿಸಿದ ಯೋಜನೆಯನ್ನು ಅನುಷ್ಠಾನಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಕನ್ನಡ ಗಣಕ ಪರಿಷತ್ತಿನ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಕನ್ನಡ ತಂತ್ರಾಂಶ ನುಡಿ ನಿರ್ಮಾಣದ ಸಹಭಾಗಿ ಜಿ.ಎನ್. ನರಸಿಂಹಮೂರ್ತಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯ ಮೂಲಕ ಕರ್ನಾಟಕದ ಯುವಶಕ್ತಿಯನ್ನು ಬಳಸಿಕೊಳ್ಳುವ ಉದ್ದೇಶ ಹೊಂದಲಾಗಿದೆ. ರಾಜ್ಯದಾದ್ಯಂತ ಇರುವ ಎಲ್ಲ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಈ ಮಹತ್ವದ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಯೋಜನೆಯಡಿ ಸಂಗ್ರಹಿಸಲಾದ ಮಾಹಿತಿಯನ್ನು ಮುಖ್ಯವಾಗಿ ಎರಡು ವರ್ಗಗಳಾಗಿ ವಿಂಗಡಿಸಲಾಗುವುದು. ಮೊದಲನೆಯದು ಹಕ್ಕುಸ್ವಾಮ್ಯದ ಅವಧಿ ಜಾರಿಯಲ್ಲಿರುವ ಕೃತಿಗಳು ಹಾಗೂ ಎರಡನೆಯದು ಹಕ್ಕುಸ್ವಾಮ್ಯದ ಅವಧಿ ಪೂರ್ಣಗೊಂಡಿರುವ ಕೃತಿಗಳು ಎಂದು ಅವರು ವಿವರಿಸಿದರು.

ಒಬ್ಬರೇ ರಚಿಸಿರುವ ಕೃತಿಗೆ ಕೃತಿಕಾರರ ನಿಧನದ ನಂತರ 60 ವರ್ಷಗಳವರೆಗೆ ಹಕ್ಕುಸ್ವಾಮ್ಯ ಜಾರಿಯಲ್ಲಿರುತ್ತದೆ. ಒಂದಕ್ಕಿಂತ ಹೆಚ್ಚು ಮಂದಿ ಸೇರಿ ರಚಿಸಿರುವ ಕೃತಿಗಳಿಗೆ 50 ವರ್ಷಗಳವರೆಗೆ ಹಕ್ಕುಸ್ವಾಮ್ಯ ಅನ್ವಯಿಸುತ್ತದೆ. 1926ಕ್ಕಿಂತ ಮೊದಲು ಪ್ರಕಟವಾದ ಪುಸ್ತಕಗಳು ಹಕ್ಕುಸ್ವಾಮ್ಯ ಮುಕ್ತವಾಗಿರುವ ಸಾಧ್ಯತೆ ಇದೆ. ಹೀಗಾಗಿ 1925ರವರೆಗಿನ ಪ್ರಕಟಣೆಗಳನ್ನು ಮುಕ್ತಗೊಳಿಸುವ ಉದ್ದೇಶವಿದೆ ಎಂದು ಅವರು ತಿಳಿಸಿದರು.

1926ರ ನಂತರ ಪ್ರಕಟವಾದ ಕೃತಿಗಳಲ್ಲಿರುವ ಮಾಹಿತಿಯನ್ನು ಯಾರಾದರೂ ನಮ್ಮ ಗಣಕ ವ್ಯವಸ್ಥೆಯಲ್ಲಿ ಹುಡುಕಿದರೆ, ಸಂಬಂಧಿಸಿದ ಕೃತಿಯ ಕುರಿತು ಸಂಕ್ಷಿಪ್ತ ಮಾಹಿತಿ ದೊರೆಯುವಂತೆ ವ್ಯವಸ್ಥೆ ರೂಪಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಆ ಕೃತಿಯನ್ನು ಪರಿಶೀಲಿಸಲು ಸಾಧ್ಯವಾಗುವಂತೆ ಲೇಖಕರು, ಪ್ರಕಾಶಕರು, ಬೆಲೆ ಸೇರಿದಂತೆ ಪ್ರಮುಖ ವಿವರಗಳನ್ನು ಒದಗಿಸಲಾಗುವುದು. ಇದರಿಂದ ಪುಸ್ತಕಗಳಿಗೆ ಪ್ರಚಾರವೂ ದೊರೆಯಲಿದೆ ಎಂದು ನರಸಿಂಹಮೂರ್ತಿ ಹೇಳಿದರು.

ಹಕ್ಕುಸ್ವಾಮ್ಯ ಮುಕ್ತ ಕೃತಿಗಳ ಸಂದರ್ಭದಲ್ಲಿ ಕೂಡ ಸಂಕ್ಷಿಪ್ತ ಮಾಹಿತಿ ಒದಗಿಸಿ, ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಕೃತಿಯನ್ನು ಪಡೆಯಲು ಸಾಧ್ಯವಾಗುವಂತೆ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುವುದು. ಈ ಮೂಲಕ ಯಾವುದೇ ಕೃತಿಯ ಹಕ್ಕುಸ್ವಾಮ್ಯ ಉಲ್ಲಂಘನೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯದ ಎಲ್ಲ ಲೇಖಕರು, ಪ್ರಕಾಶಕರು, ಪತ್ರಿಕಾ ಸಂಪಾದಕರು, ವಿಡಿಯೊ ವಾಹಿನಿಗಳು ಹಾಗೂ ಆಕಾಶವಾಣಿ ಕೇಂದ್ರಗಳು ತಮ್ಮಲ್ಲಿರುವ ಕೃತಿಗಳು ಮತ್ತು ಮಾಹಿತಿಯನ್ನು ಈ ಯೋಜನೆಗೆ ಬಳಸಿಕೊಳ್ಳಲು ಅನುಮತಿ ನೀಡಬೇಕು ಎಂದು ಎರಡೂ ಸಂಸ್ಥೆಗಳು ಸಾರ್ವಜನಿಕವಾಗಿ ಮನವಿ ಮಾಡಿವೆ. ಸಾಧ್ಯವಾದಷ್ಟು ವೈಯಕ್ತಿಕವಾಗಿಯೂ ಮನವಿ ಸಲ್ಲಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸುಮಾರು ೨೦ ಲಕ್ಷ ಪುಸ್ತಕಗಳ ಮಾಹಿತಿಯನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಇದರಿಂದ ಕನ್ನಡದ ಸಮಗ್ರ ಸಾಂಸ್ಕೃತಿಕ ಮಾಹಿತಿ ಸಂರಕ್ಷಿಸುವುದರ ಜೊತೆಗೆ, ಕನ್ನಡಿಗರ ಕುತೂಹಲದ ಪ್ರಶ್ನೆಗಳಿಗೆ ನಿಖರ ಉತ್ತರ ಒದಗಿಸಲು ಸಾಧ್ಯವಾಗಲಿದೆ. ರಾಷ್ಟ್ರಮಟ್ಟದಲ್ಲಿಯೂ ಕನ್ನಡದ ಜ್ಞಾನ ಸಂಪತ್ತಿಗೆ ಹೊಸ ವೇದಿಕೆ ದೊರೆಯಲಿದೆ ಎಂದು ನರಸಿಂಹಮೂರ್ತಿ ವಿವರಿಸಿದರು.

ಈ ವ್ಯವಸ್ಥೆಯಲ್ಲಿ ಸಾಹಿತ್ಯ, ಕಲೆ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ಮಾಹಿತಿಯನ್ನು ಕನ್ನಡದಲ್ಲಿಯೇ ಒದಗಿಸುವ ಉದ್ದೇಶವಿದೆ. ಯಾವುದೇ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳ ಕುರಿತು ಮಾಹಿತಿ ನೀಡುವುದು, ಕನ್ನಡ ಬರಹಗಳ ಕಾಗುಣಿತ ಮತ್ತು ವ್ಯಾಕರಣ ದೋಷಗಳನ್ನು ತಿದ್ದುವುದು ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.

ಮಾತಿನಿಂದ ಪಠ್ಯ ರಚನೆ, ಪಠ್ಯದ ಓದುವಿಕೆ, ಹಳೆಯ ಪುಸ್ತಕ, ಪತ್ರಿಕೆ ಅಥವಾ ಚಿತ್ರದಲ್ಲಿರುವ ಮಾಹಿತಿಯನ್ನು ಮರುಪಠ್ಯ ರೂಪದಲ್ಲಿ ಒದಗಿಸುವುದು ಹಾಗೂ ತಂತ್ರಜ್ಞರಿಗೆ ಅಗತ್ಯವಿರುವ ಅನ್ವಯಿಕೆಗಳನ್ನು ಅಭಿವೃದ್ಧಿಪಡಿಸಲು ನೆರವಾಗುವುದು ಸೇರಿದಂತೆ ಹಲವು ಸೌಲಭ್ಯಗಳನ್ನು ಈ ವ್ಯವಸ್ಥೆ ಒದಗಿಸಲಿದೆ ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಲಭ್ಯವಿರುವ ಜ್ಞಾನ ಸಂಪತ್ತನ್ನು ತಂತ್ರಜ್ಞಾನದ ಮೂಲಕ ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಸುಲಭವಾಗಿ ತಲುಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಕನ್ನಡದ ಜ್ಞಾನ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಪತ್ತನ್ನು ಒಂದೇ ವ್ಯವಸ್ಥೆಯಲ್ಲಿ ಲಭ್ಯವಾಗಿಸುವ ಮೂಲಕ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಜಿ.ಎನ್. ನರಸಿಂಹಮೂರ್ತಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್.ಎಸ್. ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button