ಜಿಲ್ಲಾಸುದ್ದಿ

ಪಾಕಿಸ್ತಾನದ ಉಗ್ರರೊಂದಿಗೆ ಸಂಪರ್ಕ ಆರೋಪ: ಬೀದರ್‌ನ ಯುವಕ ಸೇರಿ ಏಳು ಮಂದಿ ವಿರುದ್ಧ ಎಫ್‌ಐಆರ್

ಬೀದರ್, ಅ.5– ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಹಾಗೂ ಅಕ್ರಮ ಶಸ್ತ್ರಾಸ್ತ್ರಗಳ ಜಾಲದೊಂದಿಗೆ ನಂಟು ಹೊಂದಿರುವ ಆರೋಪದ ಮೇರೆಗೆ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಯೆಂಕೂರ ಗ್ರಾಮದ ನಿವಾಸಿ ವಿಶಾಲ್ ಕುಮಾರ್ ಮೇತ್ರೆ (24) ಸೇರಿದಂತೆ ಏಳು ಮಂದಿಯ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಪೊಲೀಸರ ಪ್ರಕಾರ, ವಿಶಾಲ್ ಕುಮಾರ್ ಮೇತ್ರೆ ಪಾಕಿಸ್ತಾನ ಮೂಲದ ಶಹಜಾದ್ ಭಟ್ಟಿ ಹಾಗೂ ಆತನ ಸಹಚರರಾದ ರಾಣಾ ಹುಸೇನ್ ಮತ್ತು ನೂಮಿ ಖಾನ್ ಅವರೊಂದಿಗೆ ಸಾಮಾಜಿಕ ಜಾಲತಾಣ ಹಾಗೂ ಸಂದೇಶ ವಿನಿಮಯದ ಮೂಲಕ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ.

ವಿಶಾಲ್ ಕುಮಾರ್ ಅವರ ಮೊಬೈಲ್‌ ಪರಿಶೀಲಿಸಿದ ವೇಳೆ ಅಕ್ರಮ ಬಂದೂಕುಗಳ ಖರೀದಿ ಹಾಗೂ ಸಾಗಣೆ ಕುರಿತು ನಡೆದಿರುವ ಸಂಭಾಷಣೆಗಳು ಪತ್ತೆಯಾಗಿವೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ರಾಣಾ ಹುಸೇನ್ ಕಳುಹಿಸಿದ್ದ ಸಂದೇಶಗಳಿರುವ ಸಂದೇಶ ವಾಹಿನಿಗಳಲ್ಲೂ ವಿಶಾಲ್ ಸೇರಿಕೊಂಡಿದ್ದ ಎನ್ನಲಾಗಿದೆ.

ಪ್ರಕರಣದಲ್ಲಿ ವಿಶಾಲ್ ಕುಮಾರ್ ಮೇತ್ರೆ, ಪಾಕಿಸ್ತಾನದ ಶಹಜಾದ್ ಭಟ್ಟಿ, ರಾಣಾ ಹುಸೇನ್, ನೂಮಿ ಖಾನ್, ಉತ್ತರ ಪ್ರದೇಶದ ಆಶು ಶರ್ಮಾ ಮೈನುಪುರಿ, ಮಧ್ಯಪ್ರದೇಶದ ರಾಜ್ ಭಾಯಿ ಅಲಿಯಾಸ್ ಲಕ್ಕಿ ಸಿಂಗ್ ಸೇರಿದಂತೆ ಏಳು ಮಂದಿಯನ್ನು ಆರೋಪಿಗಳಾಗಿ ಹೆಸರಿಸಲಾಗಿದೆ. ಮತ್ತೊಬ್ಬ ವ್ಯಕ್ತಿಯ ಗುರುತು ತನಿಖೆಯ ಬಳಿಕ ಪತ್ತೆಯಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ವಿವಿಧ ಕಲಂಗಳು ಹಾಗೂ ಭಾರತೀಯ ನ್ಯಾಯ ಸಂಹಿತೆಯ ಕಲಂ 61(2) ಮತ್ತು 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಉಗ್ರ ಚಟುವಟಿಕೆಗಳಿಗೆ ಸಂಚು ರೂಪಿಸಿರುವುದು, ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವುದು ಹಾಗೂ ಅಂತಹ ಚಟುವಟಿಕೆಗಳಿಗೆ ಬೆಂಬಲ ನೀಡಿರುವ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ.

ವಿಶಾಲ್ ಕುಮಾರ್‌ನನ್ನು ಬಂಧಿಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಡಿಜಿಟಲ್ ಸಂವಹನ, ಸಂದೇಶ ವಾಹಿನಿಗಳಲ್ಲಿನ ಸಂಪರ್ಕ, ಅಕ್ರಮ ಶಸ್ತ್ರಾಸ್ತ್ರಗಳ ಕುರಿತು ನಡೆದಿರುವ ಸಂಭಾಷಣೆ ಹಾಗೂ ಇತರ ಆರೋಪಿಗಳೊಂದಿಗೆ ಆತನ ಸಂಬಂಧದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ವರ್ಗ: ಅಪರಾಧ

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button