ದಸರಾ ಕ್ರೀಡಾಕೂಟಕ್ಕೆ ಕ್ರೀಡಾಪಟುಗಳ ಉತ್ಸಾಹದ ಚಾಲನೆ ಸಿ.ಎಂ. ಕಪ್–2026: ವಿವಿಧ ವಿಭಾಗಗಳಲ್ಲಿ ಸ್ಪರ್ಧೆ

ಕಲಬುರಗಿ, ಸೆ. 30: ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಸಿ.ಎಂ. ಕಪ್–2026ಕ್ಕೆ ಕಲಬುರಗಿ ಉಪವಿಭಾಗದ ಸಹಾಯಕ ಆಯುಕ್ತರಾದ ರಿತಿಕಾ ವರ್ಮಾ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿರುವ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಈಜು, ಲಾನ್ ಟೆನಿಸ್, ಹ್ಯಾಂಡ್‌ಬಾಲ್, ಜುಡೋ ಹಾಗೂ ಶೂಟಿಂಗ್ ಸೇರಿದಂತೆ ವಿವಿಧ ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡರು. ಉತ್ತಮ ಪ್ರದರ್ಶನ ನೀಡುವ ಮೂಲಕ ಮುಂದಿನ ಹಂತದ ಸ್ಪರ್ಧೆಗಳಿಗೆ ಅರ್ಹತೆ ಪಡೆಯುವ ನಿರೀಕ್ಷೆಯೊಂದಿಗೆ ಕ್ರೀಡಾಪಟುಗಳು ಕಣಕ್ಕಿಳಿದರು.
ಈ ಸಂದರ್ಭದಲ್ಲಿ ಹಾಕಿ ತರಬೇತುದಾರ ಸಂಜಯ ಬಾಣದ, ಅಥ್ಲೆಟಿಕ್ಸ್ ತರಬೇತುದಾರ ರಾಜು ಬಾಬು ಚವ್ಹಾಣ, ಬಾಸ್ಕೆಟ್‌ಬಾಲ್ ತರಬೇತುದಾರ ಪ್ರವೀಣ ಕುಮಾರ, ಜುಡೋ ತರಬೇತುದಾರ ಅಶೋಕ ಎಂ., ಖೇಲೋ ಇಂಡಿಯಾ ತರಬೇತುದಾರ ಸಂತೋಷ ಭಾವಿಮನಿ, ಈಜು ತರಬೇತುದಾರರಾದ ರೇಣುಕಾ ಬಿರಾ ಹಾಗೂ ಮಚೇಂದ್ರಸಿಂಗ್ ಠಾಕೂರ, ಕಚೇರಿ ಸಿಬ್ಬಂದಿ ರಾಜಕುಮಾರ ಕೋರಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



