ಜಿಲ್ಲಾಸುದ್ದಿ

ಬಸವಾದಿ ಶರಣರ ಹಿಂದೂ ಸಮಾವೇಶದ ವಿರುದ್ಧ ಪ್ರತಿಭಟನೆ ಸರಿಯಲ್ಲ: ಸವಿತಾನಂದನಾಥ ಸ್ವಾಮೀಜಿ

ಕಲಬುರಗಿ, ಸೆ.24: ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಸೆ.27ರಂದು ಕನ್ನೇರಿ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿರುವ ಬಸವಾದಿ ಶರಣರ ಹಿಂದೂ ಸಮಾವೇಶವನ್ನು ವಿರೋಧಿಸಿ ಸೆ.25ರಂದು ಕಮ್ಯುನಿಸ್ಟ್‌ವಾದಿಗಳು ಪ್ರತಿಭಟನೆ ನಡೆಸಲು ಮುಂದಾಗಿರುವುದು ಸರಿಯಲ್ಲ ಎಂದು ಕೊಂಚೂರು ಸವಿತಾ ಮಠದ ಸವಿತಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜದ ರಕ್ಷಣೆ ಹಾಗೂ ಧರ್ಮದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗಿದೆ. ವಿವಿಧ ಸಮಾಜಗಳ ಜನರು, ವಿಶೇಷವಾಗಿ ಕಾಯಿಕ ಸಮಾಜದವರು ಕೂಡ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸವಿತಾ ಹಾಗೂ ಹಡಪದ ಸಮಾಜದವರೂ ಭಾಗವಹಿಸಲಿದ್ದಾರೆ ಎಂದರು.

ಬಸವಾದಿ ಶರಣರ ಹೆಸರನ್ನು ಬಳಸಿಕೊಂಡು ಸಮಾಜವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಸಮಾವೇಶದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕಾಯಿಕ ಸಮಾಜದವರ ಹೆಸರನ್ನು ಬಳಸುವುದಕ್ಕೆ ಸಮಾಜದವರು ಒಪ್ಪಬಾರದು. ಪ್ರತಿಭಟನೆ ನಡೆಸಿದ ಬಳಿಕವೂ ಅದರಲ್ಲಿ ಪಾಲ್ಗೊಂಡವರು ಸಮಾಜದ ಮುಖಂಡರ ಪರವಾಗಿ ಮಾತನಾಡಿದ್ದಾರೆ ಎಂದು ಹೇಳಲಾಗುವುದಿಲ್ಲ. ಕಾಯಿಕ ಸಮಾಜ ವಿರೋಧಿ ನೀತಿಯನ್ನು ಅನುಸರಿಸುವ ಪ್ರತಿಭಟನೆಯಲ್ಲಿ ಸಮಾಜದವರು ಭಾಗವಹಿಸಬಾರದು ಎಂದು ಮನವಿ ಮಾಡಿದರು.

ಬಸವಣ್ಣ ಹಿಂದೂ ವಿರೋಧಿ ಹೇಳಿಕೆ ನೀಡಿಲ್ಲ

ಬಸವಣ್ಣನವರು ಹಿಂದೂ ವಿರೋಧಿ ಹೇಳಿಕೆ ನೀಡಿಲ್ಲ. ಅವರು ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ವಿರೋಧಿಸಿದ್ದರು. ಬಸವಣ್ಣನವರ ವಿಚಾರಗಳನ್ನು ನಾವು ಕೂಡ ಒಪ್ಪಿಕೊಂಡಿದ್ದೇವೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಆಶಯಗಳ ಅಡಿಯಲ್ಲಿ ಹಿಂದೂ ಸಮಾಜವನ್ನು ಸಂಘಟಿಸುವ ಕೆಲಸ ನಡೆಯುತ್ತಿದೆ ಎಂದು ಸವಿತಾನಂದನಾಥ ಸ್ವಾಮೀಜಿ ಹೇಳಿದರು.

ಯಾವುದೇ ಒಂದು ಕಾಲಘಟ್ಟದಲ್ಲಿ ವ್ಯಕ್ತಿಯೊಬ್ಬರು ಹೇಳಿದ ಮಾತನ್ನು ಇಂದಿನ ಕಾಲಘಟ್ಟಕ್ಕೆ ನೇರವಾಗಿ ಅನ್ವಯಿಸುವುದು ಸರಿಯಲ್ಲ. ಆಯಾ ಕಾಲಘಟ್ಟದ ಹೇಳಿಕೆಗಳನ್ನು ಆಯಾ ಸಂದರ್ಭದಲ್ಲಿಯೇ ಅರ್ಥೈಸಬೇಕು. ಹಿಂದಿನ ಹೇಳಿಕೆಗಳನ್ನು ಇಂದಿನ ಪರಿಸ್ಥಿತಿಗೆ ಹೋಲಿಕೆ ಮಾಡುವುದು ಸೂಕ್ತವಲ್ಲ ಎಂದರು.

ಧರ್ಮ ರಕ್ಷಣೆಗೆ ಒಗ್ಗಟ್ಟು ಅಗತ್ಯ

ಚಿತ್ತಾಪುರ ವರದಿ: ಭಾರತವು ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಹೊಂದಿರುವ ದೇಶ. ಹಿಂದೂಗಳು ತಮ್ಮ ಹಾದಿ ತಪ್ಪದಂತೆ ಎಚ್ಚರ ವಹಿಸಬೇಕು. ಧರ್ಮದ ರಕ್ಷಣೆಗಾಗಿ ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು ಎಂದು ಸವಿತಾನಂದನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ನಡೆದ ಬಸವಾದಿ ಶರಣರ ಹಿಂದೂ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜದಲ್ಲಿ ಒಡಕು ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ. ಧರ್ಮದ ರಕ್ಷಣೆಯ ಜೊತೆಗೆ ಸಮೃದ್ಧ ದೇಶ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಒಗ್ಗಟ್ಟಾಗಿ ಮುಂದಾಗಬೇಕು ಎಂದು ಕರೆ ನೀಡಿದರು.

ಕನ್ನೇರಿ ಮಠದ ಶ್ರೀ ಕುಮಾರ ಸ್ವಾಮೀಜಿ ಮಾತನಾಡಿ, ಸೈನಿಕರು ಗಡಿಯಲ್ಲಿ ನಿಂತು ದೇಶ ರಕ್ಷಣೆ ಮಾಡುತ್ತಿದ್ದರೆ, ಕೆಲವರು ಒಳಗಿನಿಂದ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಯುವಕರು ಜಾತಿ, ಮತ, ಮೇಲು-ಕೀಳು ಎಂಬ ಭಾವನೆಗಳನ್ನು ತೊರೆದು ಹಿಂದೂಗಳೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.

ಯುವ ನಾಯಕ ಚಂದು ಪಾಟೀಲ ಅವರ ನೇತೃತ್ವದಲ್ಲಿ ಸೆ.27ರಂದು ಕಲಬುರಗಿಯಲ್ಲಿ ನಡೆಯಲಿರುವ ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ ಪ್ರತಿಯೊಬ್ಬರೂ ಕುಟುಂಬ ಸಮೇತ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸಮಾವೇಶದ ಕಾರ್ಯಾಧ್ಯಕ್ಷ ಚಂದು ಪಾಟೀಲ ಮಾತನಾಡಿ, ಪಕ್ಷಭೇದ ಮರೆತು ಎಲ್ಲರೂ ಸಮಾವೇಶದಲ್ಲಿ ಭಾಗವಹಿಸಬೇಕು. ರೈತರಿಗಾಗಿ ಕೃಷಿ ಸಂಬಂಧಿತ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಾಗುವುದು. ಹಿಂದೂ ಸಮಾಜ ಒಗ್ಗಟ್ಟಾಗಿ ದೇಶದ ರಕ್ಷಣೆಗೆ ಮುಂದಾಗಬೇಕು ಎಂದರು.

ಚಿತ್ತಾಪುರ-ಸೇಡಂ ಶಿವಶಂಕರ ಮಠದ ಶಿವಶಂಕರ ಶಿವಾಚಾರ್ಯ ಹಾಗೂ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮನೆ, ಸಮಾಜ ಹಾಗೂ ದೇಶದ ಸುರಕ್ಷತೆಗಾಗಿ ಹಿಂದೂ ಸಮಾಜ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.

ಸಮಾವೇಶದಲ್ಲಿ ಪ್ರತಿ ತಾಲ್ಲೂಕಿನಿಂದ ಸುಮಾರು 5 ಸಾವಿರ ಜನರು ಭಾಗವಹಿಸಿ ಹಿಂದೂ ಸಮಾಜದ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶಶಿಕಲಾ ತೆಂಗಳಿ, ಸೋಮಶೇಖರ ಪಾಟೀಲ ಬೆಳಗುಂಪಾ, ವಿಶ್ವಲ್ ನಾಯಕ, ಮಲ್ಲಿಕಾರ್ಜುನ ಎಮ್ಮನೋರ್, ಅಯ್ಯಪ್ಪ ರಾಮತೀರ್ಥ, ಚಂದ್ರಶೇಖರ ಅವಂಟಿ, ಆನಂದ ಪಾಟೀಲ ನರಬೋಳಿ, ಮಲ್ಲಿಕಾರ್ಜುನ ರೆಡ್ಡಿ ಇಚಾರ್, ಕೋಟೇಶ್ವರ ರೇಷ್ಮೆ, ಬಸವರಾಜ ಹೂಗಾರ, ಪೋಮಾ ರಾಠೋಡ್, ತುಕಾರಾಮ ನಾಯಕ, ಮಲ್ಲಿಕಾರ್ಜುನ ಪೂಜಾರಿ, ಬಸವರಾಜ ಸಂಕನೂರ, ಬಸವರಾಜ ಕಾಳಗಿ, ಸಿದ್ದರಾಮಪ್ಪ ರೇಷ್ಮೆ, ರಮೇಶ ಬೊಮ್ಮನಹಳ್ಳಿ, ಮಹೇಶ ಬಾಳಿ, ವೀರಣ್ಣ ಯಾರಿ, ದಶರಥ ದೊಡ್ಡಮನಿ, ಶ್ರೀಶೈಲ ಪಾಟೀಲ, ಬಸಲಿಂಗಪ್ಪ ಸಜ್ಜನ, ಸಂತೋಷ ಹಾವೇರಿ, ಈರಣ್ಣ ಮಟಕಂಡಿ, ವಿಶ್ವನಾಥ ಅಫಜಲಪುರಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಮಾವೇಶದ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಸಂತೋಷ ಅಲೂರ್ ಸ್ವಾಗತಿಸಿದರು. ಅಂಬರೀಷ್ ಸುಲೇಗಾಂವ ನಿರೂಪಿಸಿದರು. ಪ್ರಸಾದ್ ಅವಂಟಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button