ಜಿಲ್ಲಾಸುದ್ದಿ

ಸಂವಿಧಾನ ರಕ್ಷಣೆಗೆ ಸಂಘಟಿತರಾಗಿ ಹೋರಾಡಿ: ಹೊನ್ನೂರು ಶ್ರೀನಿವಾಸ್

ಕಲಬುರಗಿ, ಸೆ.21: ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಅಪಾಯದ ಅಂಚಿನಲ್ಲಿದ್ದು, ಅದರ ರಕ್ಷಣೆಗಾಗಿ ದಲಿತ ಸಮುದಾಯದವರು ಜಾಗೃತರಾಗಿ, ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕ ಹೊನ್ನೂರು ಶ್ರೀನಿವಾಸ್ ಕರೆ ನೀಡಿದರು.

ನಗರದ ಕನ್ನಡ ಭವನದಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಮಟ್ಟದ ಪದಾಧಿಕಾರಿಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಐದು ದಶಕಗಳಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯದ 101 ಜಾತಿ ಸಮುದಾಯಗಳ ಪರವಾಗಿ ನಿರಂತರ ಹೋರಾಟ ನಡೆಸಿಕೊಂಡು ಬಂದಿದೆ ಎಂದರು.

ಮಲ ಹೊರುವ ಪದ್ಧತಿ, ದೇವದಾಸಿ ಪದ್ಧತಿಯಂತಹ ಅನಿಷ್ಟ ಆಚರಣೆಗಳ ನಿರ್ಮೂಲನೆಗೆ ಸಂಘಟನೆ ಮಹತ್ವದ ಹೋರಾಟ ನಡೆಸಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಹೇಳಿದರು.

ಕೋಮುವಾದಿ ಶಕ್ತಿಗಳ ವಿರುದ್ಧ ಸಂಘಟಿತರಾಗಿ ಸೆಡ್ಡು ಹೊಡೆಯುವ ಅಗತ್ಯವಿದೆ. ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಲು ಜನರು ಸಂಘಟಿತ ಹೋರಾಟ ನಡೆಸಬೇಕು ಎಂದರು.

ಒಳಮೀಸಲಾತಿ ಜಾರಿಗೆ ಪ್ರೊ. ಬಿ. ಕೃಷ್ಣಪ್ಪ ಅವರ ಕೊಡುಗೆ ಅಪಾರ. ಪರಿಶಿಷ್ಟರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಪರಿಶಿಷ್ಟರ ಕಲ್ಯಾಣಕ್ಕೆ ಮಾತ್ರ ಬಳಸಬೇಕು. ಆ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕಾರ್ಯಾಗಾರದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಸುರೇಶ್ ಮೆಂಗನ್, ವಿಭಾಗೀಯ ಸಂಚಾಲಕ ಧರ್ಮಣ್ಣ ಕೋಣೆಕರ್, ಜಿಲ್ಲಾ ಸಂಚಾಲಕ ಭೀಮಶಾ ಖನ್ನಾ, ಶಿವಕುಮಾರ ಆಜಾದಪುರ, ದವಳಪ್ಪ ಮದನ್, ರಾಣು ಮುದ್ದನಕರ್, ಶ್ಯಾಮರಾಯ ಸಿಂಧೆ, ವಿಜಯಕುಮಾರ ಜೋಗುರ, ವಿಜಯಕುಮಾರ ಟೈಗರ್, ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ಸವಿತಾ ತೀರ್ಥ, ಉಪ ವಿಭಾಗೀಯ ಸಂಚಾಲಕರಾದ ವಿಜಯಕುಮಾರ ಸಿಂಧೆ, ವಿಠಲ ತೇಗನೂರ, ಗುಂಡಪ್ಪ ಮಂದೇವಾಲ, ಜಗದೀಶ ಸಾಗರ, ಗೌತಮ್ ಉಪಾಧ್ಯಾಯ, ಭಾಗಣ್ಣ ಕಟ್ಟಿ ಸೇರಿದಂತೆ ವಿಭಾಗೀಯ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button