ಕಲ್ಯಾಣ ಕರ್ನಾಟಕ

ಹೈಕೋರ್ಟ್ ಕ್ರಾಸ್ ಬಳಿ ರಾತ್ರಿ ಸಿದ್ದರಾಮಯ್ಯ ಪ್ರತಿಮೆ ಪ್ರತಿಷ್ಠಾಪನೆ: ಬೆಳಿಗ್ಗೆ ಪಾಲಿಕೆಯಿಂದ ತೆರವು

ಕಲಬುರಗಿ, ಸೆ.17: ನಗರದ ಹೈಕೋರ್ಟ್ ಕ್ರಾಸ್ ಬಳಿಯ ಅಫಜಲಪುರ ಮಾರ್ಗದ ತಿರುವಿನಲ್ಲಿ ಬುಧವಾರ ತಡರಾತ್ರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಯಾವುದೇ ಅನುಮತಿ ಪಡೆಯದೆ ಪ್ರತಿಮೆ ಪ್ರತಿಷ್ಠಾಪಿಸಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ಗುರುವಾರ ಬೆಳಿಗ್ಗೆ ಅದನ್ನು ತೆರವುಗೊಳಿಸಿದ್ದಾರೆ.

ಸೆ.16ರಂದು ರಾತ್ರಿ 8 ಗಂಟೆ ಸುಮಾರಿಗೆ ಕೆಲವರು ಯಾವುದೇ ಅನುಮತಿ ಪಡೆಯದೆ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಿಲ್ಲಾ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಪ್ರತಿಮೆ ಸ್ಥಾಪಿಸಲಾಗಿದ್ದು, ಇದೇ ಮಾರ್ಗವಾಗಿ ಅವರು ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ದೇವಲ್ ಗಾಣಗಾಪುರದ ದತ್ತಾತ್ರೇಯ ದೇವಾಲಯದ ದರ್ಶನಕ್ಕೆ ತೆರಳುವ ಮುನ್ನವೇ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ.

ಹೈಕೋರ್ಟ್ ಕ್ರಾಸ್ ಬಳಿ ಪ್ರತಿಮೆ ಸ್ಥಾಪಿಸಿರುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಪೊಲೀಸ್ ಬಂದೋಬಸ್ತ್‌ನಲ್ಲಿ ಪ್ರತಿಮೆಯನ್ನು ತೆರವುಗೊಳಿಸಲಾಯಿತು.

ಯಾವುದೇ ಅನುಮತಿ ಪಡೆಯದೆ ಸಾರ್ವಜನಿಕ ಸ್ಥಳದಲ್ಲಿ ಪ್ರತಿಮೆ ಪ್ರತಿಷ್ಠಾಪಿಸಿರುವ ಹಿನ್ನೆಲೆಯಲ್ಲಿ ತೆರವು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೆಯೂ ಸಿದ್ದರಾಮಯ್ಯ ಸರ್ಕಲ್ ನಿರ್ಮಾಣದ ಯತ್ನ

ಇದೇ ಸ್ಥಳದಲ್ಲಿ ಕಳೆದ ಎರಡು-ಮೂರು ವರ್ಷಗಳ ಹಿಂದೆ ರಾತ್ರಿ ವೇಳೆ ಸಿದ್ದರಾಮಯ್ಯ ಅವರ ಭಾವಚಿತ್ರವಿರುವ ಬ್ಯಾನರ್ ಅಳವಡಿಸಿ ‘ಸಿದ್ದರಾಮಯ್ಯ ಸರ್ಕಲ್’ ನಿರ್ಮಿಸಲು ಯತ್ನಿಸಲಾಗಿತ್ತು ಎನ್ನಲಾಗಿದೆ. ಆಗಲೂ ಸಂಬಂಧಪಟ್ಟವರಿಂದ ಅನುಮತಿ ಪಡೆಯಲಾಗಿರಲಿಲ್ಲ ಎಂದು ತಿಳಿದುಬಂದಿದೆ.

ಸದ್ಯ ಸಿದ್ದರಾಮಯ್ಯ ಅವರ ಪ್ರತಿಮೆ ತೆರವು ವಿಚಾರ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದ್ದು, ಅನುಮತಿ ಇಲ್ಲದೆ ಪ್ರತಿಮೆ ಸ್ಥಾಪಿಸಿದವರ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button