ಕಲಬುರಗಿಯಲ್ಲಿ ಸೆ.15ರಂದು ಎಮಿನೆಂಟ್ ಎಂಜಿನಿಯರ್ ಪ್ರಶಸ್ತಿ ಪ್ರದಾನ

ಕಲಬುರಗಿ, ಸೆ.13: ನಗರದ ಕೋರ್ಟ್ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಭವನದಲ್ಲಿ ಸೆ.15ರಂದು ಸಂಜೆ 6 ಗಂಟೆಗೆ ದಿ ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ (ಇಂಡಿಯಾ) ಕಲಬುರಗಿ ಸ್ಥಳೀಯ ಕೇಂದ್ರದ ವತಿಯಿಂದ 59ನೇ ಎಂಜಿನಿಯರ್ಸ್ ಡೇ ಆಚರಣೆ ಹಾಗೂ ಎಮಿನೆಂಟ್ ಎಂಜಿನಿಯರ್ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕಕ್ಕೇರಿ ಚಂದ್ರಶೇಖರ ಹಾಗೂ ಕಾರ್ಯದರ್ಶಿ ಉದಯ ಶಂಕರ್ ಬಳ್ಳಾರಿ ತಿಳಿಸಿದ್ದಾರೆ.
ಸಮಾರಂಭದಲ್ಲಿ ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ಉದ್ಯಮಿ ಹಾಗೂ ಶಿಕ್ಷಣ ಪ್ರೇಮಿ ವಿಷ್ಣುದಾಸ ತಪಡಿಯ, ಸುಭಾಷ್ ಲಾಲಪ್ಪ ಶಿಕ್ಷಣಕರ್ ಹಾಗೂ ಚೀಫ್ ಎಂಜಿನಿಯರ್ ಪಿಡಬ್ಲ್ಯುಡಿ ನಾರ್ತ್ ಈಸ್ಟ್ ಝೋನ್ ಅವರು ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಹೈದರಾಬಾದ್ನ ಮೆಪ್ಸ್ಟ್ರೋ ಗ್ರೂಪ್ ಆಫ್ ಕಂಪನಿಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ದೀಪಕ್ ದೀಕ್ಷಿತ್ ಅವರು ‘Engineering Excellence for a Sustainable and Technologically Sovereign India’ ವಿಷಯದ ಕುರಿತು ದಿಕ್ಸೂಚಿ ನುಡಿಗಳನ್ನು ಆಡಲಿದ್ದಾರೆ. ದಿ ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ನ ಅಧ್ಯಕ್ಷ ಕಕ್ಕೇರಿ ಚಂದ್ರಶೇಖರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ 21 ಸಾಧಕ ಎಂಜಿನಿಯರ್ಗಳಿಗೆ ಇದೇ ಸಂದರ್ಭದಲ್ಲಿ ‘ಎಮಿನೆಂಟ್ ಎಂಜಿನಿಯರ್ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಡಾ. ಅಮರೇಶ್ವರಿ ಎಸ್. ಪಾಟೀಲ, ಡಾ. ಅಂಬರೀಶ್ ಪಿ. ಅಂಬಲಗಿ, ಡಾ. ಬಾಬುರಾವ್ ಎನ್. ಶೇರಿಕಾರ್, ಆರ್ಕಿಟೆಕ್ಟ್ ಬಿ. ಭರತ್ ಭೂಷಣ್, ಗೌರೆ ಹನುಮಂತರಡ್ಡಿ, ಶ್ರೀಮತಿ ಲಲಿತಾ, ಎಂ.ಎಂ. ಕಪೂರ್, ಮಹೇಶ್ ಎ. ಚಂಗಟಾ, ಓಂಪ್ರಕಾಶ್ ಎಸ್. ಕರಣಗಿ, ಪದ್ಮಾವತಿ ಈ. ಗುಂಡಗುर्ती, ಪಲ್ಲ ಸತ್ಯಶೀಲರೆಡ್ಡಿ, ಕಾಜಿ ಅಬ್ದುಲ್ ಮೊಹಿತ್, ರಮೇಶ್ ಧೂಳಪ್ಪ ಸಾಹು, ರಫಿಯುದ್ದೀನ್, ರಾಮಪ್ಪ ಎಚ್. ಕೊರವಾರ, ಡಾ. ಸಂಗಮೇಶ್, ಶಿವನಗೌಡ ಎಸ್. ಪಾಟೀಲ, ಡಾ. ಸೌಮ್ಯ ಎಂ. ಅಣಕಲ್ (ಪೆದ್ದಿ), ಡಾ. ಸೈಯದ್ ಕಾಸಿಫ್ ಹುಸೇನ್, ವಾಸುದೇವ ಹಾಗೂ ವಿಶ್ವನಾಥ್ ಚಿನ್ಮಳ್ಳಿ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಡಾ. ವಿಶಾಲ್ ದತ್ತ ಕೊಹಿರ್ ಅವರ ಸಂಚಾಲಕತ್ವದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಸಪ್ರಶ್ನೆ ಹಾಗೂ ಚರ್ಚಾ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಗುವುದು.
ಕಲಬುರಗಿಯ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಎಂಜಿನಿಯರಿಂಗ್ ಸಂಸ್ಥೆಯ ಎಲ್ಲ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.



