ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ತರಬೇತಿ
ಸಹಕಾರ ಸಂಘಗಳು ರೈತರ ಸಹಕಾರದೊಂದಿಗೆ ಲಾಭದಾಯಕ ವ್ಯವಹಾರ ನಡೆಸಬೇಕು

ಕಲಬುರಗಿ, ಆ.29- ರೈತ ದೇಶದ ಬೆನ್ನೆಲುಬಾಗಿದ್ದು, ಸಹಕಾರ ಕ್ಷೇತ್ರವು ಅಭಿವೃದ್ಧಿ ಹೊಂದಿದಾಗ ಮಾತ್ರ ರೈತರ ಕಲ್ಯಾಣ ಸಾಧ್ಯ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷೆ ಸುನಂದಾ ಬಿ. ಪಾಟೀಲ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು, ಕಲಬುರಗಿ ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಸಹಕಾರ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಗುಬ್ಬಿ ಕಾಲೋನಿಯ ಕೆಐಸಿಎಂ ತರಬೇತಿ ಸಂಸ್ಥೆಯಲ್ಲಿ ಶನಿವಾರ ಆಳಂದ ಮತ್ತು ಅಫಜಲಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಹಕಾರ ತತ್ವದ ಮೂಲ ಆಶಯವನ್ನು ಅರ್ಥಮಾಡಿಕೊಂಡು ಕಾರ್ಯನಿರ್ವಹಿಸಬೇಕು. ರೈತರ ಸಹಕಾರದೊಂದಿಗೆ ಸಂಘಗಳು ಲಾಭದಾಯಕ ವ್ಯವಹಾರಗಳನ್ನು ನಡೆಸುವ ಮೂಲಕ ರೈತರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಬೇಕು ಎಂದು ಕರೆ ನೀಡಿದರು.
ಇದಕ್ಕೂ ಮುನ್ನ ಕಲಬುರಗಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ವೀರಾರೆಡ್ಡಿ ಎಸ್. ಪಾಟೀಲ ಅವರು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರಾಯಚೂರು ಕೃಷಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ರವೀಂದ್ರ ಪಾಟೀಲ ಅವರು ಒತ್ತಡ ನಿರ್ವಹಣೆ, ಕಲಬುರಗಿ ಸರ್ಕಾರಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಟಿ. ಗುರುಬಸಪ್ಪ ಅವರು ಸಹಕಾರ ಸಂಘಗಳ ಇತ್ತೀಚಿನ ಕಾಯ್ದೆ ತಿದ್ದುಪಡಿಯ ಸ್ವರೂಪ, ಕೆಐಸಿಎಂ ಪ್ರಾಂಶುಪಾಲ ಅರುಣಕುಮಾರ ಹರಸೂರ ಅವರು ಸಹಕಾರ ಸಂಘಗಳ ಲೆಕ್ಕಪತ್ರ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಪಂಡಿತ್, ಮಹೇಶ ಪಸಾರ್, ಆಳಂದ ಸಹಕಾರಿ ಅಭಿವೃದ್ಧಿ ಅಧಿಕಾರಿ ಶಂಕರ ಪಾಟೀಲ, ಅಫಜಲಪುರ ಸಹಕಾರಿ ಅಭಿವೃದ್ಧಿ ಅಧಿಕಾರಿ ಚಾಂದ್ ಭಾಷಾ ಅನ್ಸಾರಿ ಸೇರಿದಂತೆ ಎರಡೂ ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ಸಹಕಾರ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುಳಾ ಎಸ್. ಬಿರಾದಾರ ಕಾರ್ಯಕ್ರಮ ನಿರೂಪಿಸಿದರು. ಕೆಐಸಿಎಂ ಪ್ರಾಂಶುಪಾಲ ಅರುಣಕುಮಾರ ಹರಸೂರ ಸ್ವಾಗತಿಸಿದರು. ಮಹಿಳಾ ಸಹಾಯಕ ಶಿಕ್ಷಕಿ ಇಸ್ಮಾಯಿಲ್ ಬಿ. ವಂದಿಸಿದರು.



