ಹಾಗರಗುಂಡಗಿ ಕೆರೆ ಉದ್ಘಾಟನಾ ಕಾರ್ಯಕ್ರಮ: ಕೊಪ್ಪಳ ಶ್ರೀಗಳಿಗೆ ಆಹ್ವಾನ..!
₹11 ಕೋಟಿ ವೆಚ್ಚದಲ್ಲಿ 156 ಎಕರೆ ವಿಸ್ತೀರ್ಣದ ಕೆರೆ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ

ಕಲಬುರಗಿ, ಆ.21- ಅಫಜಲಪುರ ಮತಕ್ಷೇತ್ರದ ಕಲಬುರಗಿ ತಾಲೂಕಿನ ಹಾಗರಗುಂಡಗಿ ಗ್ರಾಮಸ್ಥರ ಬಹುದಿನಗಳ ಕನಸಾಗಿದ್ದ 156 ಎಕರೆ ವಿಸ್ತೀರ್ಣದ ಕೆರೆ ನಿರ್ಮಾಣ ಕಾಮಗಾರಿ ಸುಮಾರು ₹11 ಕೋಟಿ ವೆಚ್ಚದಲ್ಲಿ ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ಕೆರೆ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ ಅವರು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಠಕ್ಕೆ ಭೇಟಿ ನೀಡಿ, ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ದರ್ಶನ ಪಡೆದರು. ಇದೇ ವೇಳೆ ಹಾಗರಗುಂಡಗಿ ಕೆರೆಯ ಕಾಮಗಾರಿಯ ಕುರಿತು ಶ್ರೀಗಳಿಗೆ ಮಾಹಿತಿ ನೀಡಿ, ಗ್ರಾಮಸ್ಥರ ಬಹುದಿನಗಳ ಕನಸಾಗಿರುವ ಈ ಮಹತ್ವದ ಅಭಿವೃದ್ಧಿ ಕಾರ್ಯಕ್ಕೆ ಶ್ರೀಗಳ ಪಾವನ ಆಶೀರ್ವಾದ ದೊರೆಯುವಂತೆ ಕೆರೆ ಉದ್ಘಾಟನಾ ಕಾರ್ಯಕ್ರಮಕ್ಕೆ ಭಕ್ತಿಪೂರ್ವಕವಾಗಿ ಆಹ್ವಾನಿಸಿದರು.
ಶೀಘ್ರದಲ್ಲೇ ವಿವಿಧ ಪೂಜ್ಯರ ದಿವ್ಯ ಸಾನ್ನಿಧ್ಯದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸಣ್ಣ ನೀರಾವರಿ ಸಚಿವ ಡಾ. ಅಜಯಸಿಂಗ್, ಶಾಸಕ ಎಂ.ವೈ. ಪಾಟೀಲ ಹಾಗೂ ಮಾಜಿ ಕಾರ್ಮಿಕ ಸಚಿವ ಎಸ್.ಕೆ. ಕಾಂತಾ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಕೆರೆ ತುಂಬುವ ಯೋಜನೆಯನ್ನು ಅಧಿಕೃತವಾಗಿ ಉದ್ಘಾಟಿಸಿ, ಅನ್ನದಾತ ರೈತರಿಗೆ ಸಮರ್ಪಿಸಲಾಗುವುದು ಎಂದು ಅರುಣಕುಮಾರ ಪಾಟೀಲ ತಿಳಿಸಿದರು.
ಹಾಗರಗುಂಡಗಿ ಕೆರೆ ಕೇವಲ ನೀರು ಸಂಗ್ರಹಿಸುವ ಯೋಜನೆಯಲ್ಲ. ಇದು ರೈತರ ಬದುಕಿಗೆ ಭರವಸೆ, ಕೃಷಿಗೆ ಜೀವನಾಡಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಹೊಸ ಚೈತನ್ಯ ನೀಡುವ ಮಹತ್ವದ ಹೆಜ್ಜೆಯಾಗಿದೆ. ಕೆರೆಯಲ್ಲಿ ನೀರು ಸಂಗ್ರಹವಾಗುವುದರಿಂದ ಸುತ್ತಮುತ್ತಲಿನ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದ್ದು, ಕೃಷಿ ಚಟುವಟಿಕೆಗಳು ಮತ್ತಷ್ಟು ವಿಸ್ತಾರಗೊಳ್ಳುವ ನಿರೀಕ್ಷೆಯಿದೆ.
ಶ್ರೀಗಳ ಆಶೀರ್ವಾದ ಹಾಗೂ ಸರ್ಕಾರದ ಅಭಿವೃದ್ಧಿಯ ಸಂಕಲ್ಪದೊಂದಿಗೆ ಹಾಗರಗುಂಡಗಿ ಗ್ರಾಮದ ಬಹುದಿನಗಳ ಕನಸು ನನಸಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅರುಣಕುಮಾರ ಪಾಟೀಲ ಸಂತಸ ವ್ಯಕ್ತಪಡಿಸಿದರು.



