ವೀರಾಂಜನೇಯ ದೇವಸ್ಥಾನ ಉದ್ಘಾಟನೆ: ಕಾಂಗ್ರೆಸ್-ಬಿಜೆಪಿ ಘರ್ಷಣೆಯಿಂದ ರಂಜೋಳ್ ಉದ್ವಿಗ್ನ
ದೇವಸ್ಥಾನ ಕಾರ್ಯಕ್ರಮಕ್ಕೂ ಮುನ್ನ ರಾಜಕೀಯ ಆರೋಪ-ಪ್ರತ್ಯಾರೋಪ; ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣ

ಸೇಡಂ, ಆ.21- ತಾಲೂಕಿನ ರಂಜೋಳ್ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ವೀರಾಂಜನೇಯ ದೇವಸ್ಥಾನದ ಉದ್ಘಾಟನೆ ಹಾಗೂ ಒಂಬತ್ತು ಗ್ರಾಮ ದೇವತೆಗಳ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೂ ಮುನ್ನವೇ ರಾಜಕೀಯ ಆರೋಪ-ಪ್ರತ್ಯಾರೋಪಗಳು ಕೇಳಿಬಂದು, ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಯಿಂದ ಕೆಲಕಾಲ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮುದ್ರಿತ ಆಮಂತ್ರಣ ಪತ್ರಿಕೆ ಹಾಗೂ ವಿವಿಧ ಮುಖಂಡರಿಗೆ ನೀಡಲಾಗುತ್ತಿದ್ದ ಆಹ್ವಾನದಲ್ಲಿ ರಾಜಕೀಯ ತಾರತಮ್ಯ ಮಾಡಲಾಗುತ್ತಿದೆ. ಅಲ್ಲದೆ, ದೇವಸ್ಥಾನ ನಿರ್ಮಾಣಕ್ಕಾಗಿ ವಿವಿಧ ಸಮುದಾಯಗಳು ಹಾಗೂ ಮುಖಂಡರಿಂದ ಕೋಟ್ಯಂತರ ರೂಪಾಯಿ ದೇಣಿಗೆ ಸಂಗ್ರಹಿಸಿ, ಆ ಹಣದ ದುರ್ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರ ನೇತೃತ್ವದಲ್ಲಿ ಕೆಲ ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರು ದೇವಸ್ಥಾನಕ್ಕೆ ತೆರಳಿ ಭಜನೆ ಮಾಡಲು ಮುಂದಾದರು.
ಈ ಸಂದರ್ಭದಲ್ಲಿ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ‘ನಮ್ಮೂರಿನ ಸಮಸ್ಯೆ ಇದೆ, ನೀವೇನು ಬರುತ್ತೀರಿ?’ ಎಂದು ಪ್ರಶ್ನಿಸಿದ್ದರಿಂದ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಡಿವೈಎಸ್ಪಿ ನೇತೃತ್ವದ ಪೊಲೀಸ್ ತಂಡ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿತು.
ಎಲ್ಲರನ್ನೂ ಸಮಾನವಾಗಿ ಆಹ್ವಾನಿಸಿ: ತೆಲ್ಕೂರ್
ದೇವಸ್ಥಾನ ಯಾವುದೇ ಪಕ್ಷ ಅಥವಾ ವ್ಯಕ್ತಿಯ ಸ್ವತ್ತಲ್ಲ. ಇದು ಗ್ರಾಮದ ಎಲ್ಲ ಸಮುದಾಯಗಳ ಭಕ್ತರ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ಸ್ಥಳವಾಗಿದೆ. ಹೀಗಾಗಿ ದೇವತೆಗಳ ಪ್ರತಿಷ್ಠಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಕ್ಕೆ ಎಲ್ಲ ಸಮುದಾಯಗಳ ಮುಖಂಡರು ಹಾಗೂ ಭಕ್ತರನ್ನು ಸಮಾನವಾಗಿ ಆಹ್ವಾನಿಸಿ, ಯಾವುದೇ ರಾಜಕೀಯ ಭೇದಭಾವವಿಲ್ಲದೆ ಕಾರ್ಯಕ್ರಮ ನಡೆಸಬೇಕು ಎಂದು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಹಾಗೂ ಗ್ರಾಮದಲ್ಲಿನ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.
ಇದೇ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು, ಮುಖಂಡರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೆಲಕಾಲ ಕೈಕೈ ಮಿಲಾಯಿಸುವ ಘಟನೆಗಳೂ ನಡೆದವು. ಕೆಲವು ಕಾಂಗ್ರೆಸ್ ಕಾರ್ಯಕರ್ತರು ಕಟ್ಟಿಗೆಗಳನ್ನು ಕೈಗೆತ್ತಿಕೊಂಡು ಹಲ್ಲೆಗೆ ಮುಂದಾದರು ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ನೀಡದೆ, ಗ್ರಾಮದ ಹಿರಿಯರು ಹಾಗೂ ದೇವಸ್ಥಾನ ಸಮಿತಿ ಸದಸ್ಯರು ಪರಸ್ಪರ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಬೇಕು. ಧಾರ್ಮಿಕ ಕಾರ್ಯಕ್ರಮವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ನಡೆಸುವ ಮೂಲಕ ಗ್ರಾಮದ ಹೆಸರಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಗೂಂಡಾಗಿರಿ: ತೆಲ್ಕೂರ್ ಆರೋಪ
ದೇವಸ್ಥಾನ ನಿರ್ಮಾಣಕ್ಕಾಗಿ ರಾಯಚೂರು, ಯಾದಗಿರಿ ಸೇರಿದಂತೆ ತಾಲೂಕಿನ ವಿವಿಧೆಡೆ ರಸೀದಿ ನೀಡದೆ ಸುಮಾರು ₹10 ಕೋಟಿಗೂ ಹೆಚ್ಚು ದೇಣಿಗೆ ಸಂಗ್ರಹಿಸಲಾಗಿದೆ. ಅದರಲ್ಲಿ ಸ್ವಲ್ಪ ಹಣವನ್ನು ದೇವಸ್ಥಾನಕ್ಕೆ ಬಳಸಿಕೊಂಡು ಉಳಿದ ಹಣವನ್ನು ಗ್ರಾಮದ ಮುಖಂಡ ಕಾಂಗ್ರೆಸ್‌ನ ಸತೀಶ್ ರೆಡ್ಡಿ ದುರ್ಬಳಕೆ ಮಾಡಿದ್ದಾರೆ ಎಂದು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಆರೋಪಿಸಿದರು.
ದೇವಸ್ಥಾನಕ್ಕೆ ನನ್ನ ಕೊಡುಗೆ ಏನು ಎಂದು ಪ್ರಶ್ನಿಸುತ್ತಿರುವವರಿಗೆ, ನಾನು ಶಾಸಕನಾಗಿದ್ದಾಗ ತಾಲೂಕಿನ 20ಕ್ಕೂ ಹೆಚ್ಚು ದೇವಸ್ಥಾನಗಳಿಗೆ ₹30 ಕೋಟಿಗೂ ಅಧಿಕ ಅನುದಾನ ನೀಡಿದ್ದೇನೆ. ಹೀಗಾಗಿ ದೇವಸ್ಥಾನದ ವಿಚಾರವಾಗಿ ಮಾತನಾಡುವ ನೈತಿಕತೆ ನನಗಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಸ್ಥಳದಲ್ಲೇ ತಿರುಗೇಟು ನೀಡಿದ್ದು, ಇದರಿಂದ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮತ್ತೆ ಮಾತಿನ ಚಕಮಕಿ ನಡೆಯಿತು.
ದೇವಸ್ಥಾನ ನಿರ್ಮಾಣದ ದೇಣಿಗೆ ಕುರಿತು ತನಿಖೆಗೆ ಆಗ್ರಹ
ದೇವಸ್ಥಾನದ ಉದ್ಘಾಟನೆಗೆ ಆಯ್ದ ಕೆಲ ಸ್ವಾಮೀಜಿಗಳನ್ನು ಮಾತ್ರ ಆಹ್ವಾನಿಸಲಾಗಿದೆ. ದಲಿತ ಸಮುದಾಯದ ಸ್ವಾಮೀಜಿಗಳನ್ನು ಆಹ್ವಾನಿಸಿಲ್ಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಸಹ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ತೆಲ್ಕೂರ್ ಆರೋಪಿಸಿದರು.
ದೇವಸ್ಥಾನ ನಿರ್ಮಾಣಕ್ಕಾಗಿ ಸಂಗ್ರಹಿಸಿರುವ ದೇಣಿಗೆ ಹಾಗೂ ಖರ್ಚಿನ ಕುರಿತು ಲೋಕಾಯುಕ್ತ ತನಿಖೆ ನಡೆಸಬೇಕು. ದೇಣಿಗೆ ನೀಡಿದ ಎಲ್ಲ ಮುಖಂಡರನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದು ಅವರು ಆಗ್ರಹಿಸಿದರು.
ದೇವಸ್ಥಾನಕ್ಕೆ ಆಗಮಿಸಿದ್ದ ತಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲು ಪ್ರಚೋದನೆ ನೀಡಲಾಗಿದೆ ಎಂಬ ಆರೋಪದ ಕುರಿತು ಉದ್ಘಾಟನೆಗೂ ಮುನ್ನವೇ ಸಚಿವರು ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ದೇವಸ್ಥಾನದ ಆವರಣದಲ್ಲಿ ಮೌನ ಹಾಗೂ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ತೆಲ್ಕೂರ್ ಎಚ್ಚರಿಸಿದರು.



