ಕಲಬುರಗಿಯಲ್ಲಿ ಹಿಂದೂ ವಿರೋಧಿ, ಮುಸ್ಲಿಂ ಪರ ಕಾನೂನು: ಪೊಲೀಸರ ವಿರುದ್ಧ ಶಿವಸೇನೆ ಆರೋಪ
ಅತಿಕ್ರಮಣ ತೆರವು, ಬರಪೀಡಿತ ಜಿಲ್ಲೆ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಕಲಬುರಗಿ, ಆ.26- ನಗರದಲ್ಲಿ ಪೊಲೀಸರು ಹಿಂದೂ ವಿರೋಧಿ ಹಾಗೂ ಮುಸ್ಲಿಂ ಪರವಾದ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ಶಿವಸೇನೆ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಕೂಡಲೇ ಇಂತಹ ದ್ವಂದ್ವ ಹಾಗೂ ತಾರತಮ್ಯ ನೀತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಗಳ ವ್ಯಾಪಾರ ಮಳಿಗೆಗಳನ್ನು ತೆರವುಗೊಳಿಸುವ ಪೊಲೀಸರು, ಮಾರುಕಟ್ಟೆ ಪ್ರದೇಶದಲ್ಲಿರುವ ಮುಸ್ಲಿಂ ಸಮುದಾಯದ ಮಳಿಗೆಗಳು ಹಾಗೂ ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಚಪ್ಪಲ್ ಬಜಾರ್ ಹಾಗೂ ಹೂವಿನ ಬಜಾರ್ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗದಲ್ಲಿಯೂ ಕಾಲಿಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ರಸ್ತೆ ಮೇಲೆ ವಾಹನಗಳನ್ನು ನಿಲ್ಲಿಸಿದರೆ ದಂಡ ವಿಧಿಸುವ ಪೊಲೀಸರು, ಅದೇ ರಸ್ತೆಗಳ ಮೇಲೆ ಅನಧಿಕೃತವಾಗಿ ಪೈಪ್ ಕಂಬಗಳನ್ನು ಅಳವಡಿಸಿರುವುದನ್ನು ಏಕೆ ಗಮನಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಅತಿಕ್ರಮಣಕಾರರಿಗೆ ಉತ್ತರ ಕ್ಷೇತ್ರದ ಶಾಸಕಿ ಶ್ರೀಮತಿ ಕನೀಜ್ ಫಾತಿಮಾ ಅವರ ಬೆಂಬಲವಿದೆ ಎಂದು ಆರೋಪಿಸಿದ ಸಿದ್ದಲಿಂಗ ಸ್ವಾಮೀಜಿ, ಕೂಡಲೇ ಅತಿಕ್ರಮಣಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ಮಸೀದಿ ಧ್ವನಿವರ್ಧಕಗಳ ವಿಚಾರದಲ್ಲಿಯೂ ಸುಪ್ರೀಂ ಕೋರ್ಟ್ ನಿಯಮಗಳನ್ನು ಏಕೆ ಸಮಾನವಾಗಿ ಜಾರಿಗೊಳಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಚಿಕ್ಕಮಗಳೂರಿನಲ್ಲಿ ಟಿಪ್ಪುವಿನ 40 ಅಡಿ ಪ್ಲೆಕ್ಸ್ ಅಳವಡಿಸಿ ಪಾಕಿಸ್ತಾನದ ಹಾಡು ಹಾಕಿ ಉದ್ಘಾಟನೆ ಮಾಡಿರುವ ಘಟನೆ ಕುರಿತು ಕ್ರಮ ಕೈಗೊಳ್ಳಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ಪ್ರಕರಣವನ್ನು ಸಿಐಡಿಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.
ಪಾಲಿಕೆ ಮೇಯರ್ ಚುನಾವಣೆ ಆಗಸ್ಟ್ 29ರಂದೇ ನಡೆಯಬೇಕು. ಇಲ್ಲದಿದ್ದರೆ ಪಾಲಿಕೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ ಅವರು, ತಮ್ಮ ವಿರುದ್ಧ ರಾಜಕೀಯವಾಗಿ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದು ಸರಿಯಾದ ಕ್ರಮ. ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದ್ದರೂ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.
ಕಲಬುರಗಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದ್ದು, ಜಿಲ್ಲೆಯ ಹತ್ತು ತಾಲೂಕುಗಳಲ್ಲಿಯೂ ಈವರೆಗೆ ಬರ ಘೋಷಣೆ ಮಾಡಿಲ್ಲ. ಕೂಡಲೇ ಇಡೀ ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಅಗತ್ಯ ಪರಿಹಾರ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಪಕ್ಷಕ್ಕೆ ಒಂದು ವರ್ಷ ಪೂರ್ಣಗೊಂಡಿದ್ದು, ಸುಮಾರು 13 ಜಿಲ್ಲಾ ಸಮಿತಿಗಳನ್ನು ರಚಿಸಲಾಗಿದೆ. 24 ಜಿಲ್ಲೆಗಳಲ್ಲಿ ಪಕ್ಷದ ಸಂಘಟನಾ ಕಾರ್ಯ ವಿಸ್ತರಿಸಲಾಗಿದೆ. 20 ಲಕ್ಷ ಸದಸ್ಯತ್ವದ ಗುರಿ ಹೊಂದಲಾಗಿದ್ದು, ಮುಂಬರುವ ಎಲ್ಲ ಚುನಾವಣೆಗಳಲ್ಲಿಯೂ ಪಕ್ಷ ಸ್ಪರ್ಧಿಸಲಿದೆ ಎಂದು ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುಶಾಂತ ಟೆಂಗಳಿ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.



