ಶಿಕ್ಷಣ

ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆ ಕಾರ್ಯಾಗಾರ

ಮಣ್ಣಿನಿಂದ ಗಣೇಶ ಮೂರ್ತಿ ತಯಾರಿಕೆಗೆ ತರಬೇತಿ; ಆಗಸ್ಟ್ 27ರಿಂದ ಸೆಪ್ಟೆಂಬರ್ 14ರವರೆಗೆ ಮಾರಾಟ ವ್ಯವಸ್ಥೆ

ಕಲಬುರಗಿ, ಆ.25: ನಗರದ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ಲಲಿತಕಲಾ ವಿಭಾಗದ ವತಿಯಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆ ಹಾಗೂ ಮಾರಾಟ ಕಾರ್ಯಾಗಾರವನ್ನು ಆಗಸ್ಟ್ 27 ಮತ್ತು 28ರಂದು ಕಾಲೇಜಿನ ಗ್ರಂಥಾಲಯದ ಓದುವ ಕೊಠಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಆಗಸ್ಟ್ 27ರಂದು ಬೆಳಿಗ್ಗೆ 11 ಗಂಟೆಗೆ ನೂತನ ವಿದ್ಯಾಲಯ ಸಂಸ್ಥೆಯ ಕ್ರೀಡಾ ಸಮಿತಿ ಅಧ್ಯಕ್ಷ ಸುಹಾಸ್ ಋಣಗೆ ಅವರು ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ. ಶಿಲ್ಪಕಲಾವಿದ ರಮೇಶ್ ಪಿ. ಬಡಿಗೇರ್ ಅವರು ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆಯ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ದಯಾನಂದ ಎಂ. ಶಾಸ್ತ್ರಿ ಅಧ್ಯಕ್ಷತೆ ವಹಿಸಲಿದ್ದು, ಮಹಾವಿದ್ಯಾಲಯದ ನಿರ್ದೇಶಕ ಗೋವಿಂದ ಪೂಜಾರಿ ಉಪಸ್ಥಿತರಿರುವರು.

ಪರಿಸರ ಸಂರಕ್ಷಣೆಯ ಅಗತ್ಯವನ್ನು ಮನಗಂಡು, ಗಣೇಶ ಚತುರ್ಥಿ ಸಂದರ್ಭದಲ್ಲಿ ಪರಿಸರಕ್ಕೆ ಹಾನಿಯಾಗದ ಗಣೇಶ ಮೂರ್ತಿಗಳ ಬಳಕೆಯನ್ನು ಉತ್ತೇಜಿಸುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ. ಮಣ್ಣಿನಂತಹ ಪರಿಸರ ಸ್ನೇಹಿ ವಸ್ತುಗಳಿಂದ ಗಣೇಶ ಮೂರ್ತಿಗಳನ್ನು ತಯಾರಿಸುವ ಕುರಿತು ಕಳೆದ 10-12 ವರ್ಷಗಳಿಂದ ಮಹಾವಿದ್ಯಾಲಯದಲ್ಲಿ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನೀಡಲಾಗುತ್ತಿದೆ. ಸಾರ್ವಜನಿಕರು ಹಾಗೂ ಕಲಾಸಕ್ತರಿಗೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಖರೀದಿಗೂ ಅವಕಾಶ ಕಲ್ಪಿಸಲಾಗಿದೆ.

ಕಾರ್ಯಾಗಾರದ ಆಯೋಜಕರಾಗಿ ಲಲಿತಕಲಾ ವಿಭಾಗದ ಮುಖ್ಯಸ್ಥ ಜೀತೇಂದ್ರ ಜಿ. ಕೊತ್ತಳಿಕರ್, ಎನ್.ವಿ. ಕನ್ಯಾಶಾಲೆಯ ಚಿತ್ರಕಲಾ ಶಿಕ್ಷಕ ರಾಜಕುಮಾರ ಕಾಳೆ ಹಾಗೂ ಲಲಿತಕಲಾ ವಿಭಾಗದ ಉಪನ್ಯಾಸಕ ನಾಗರಾಜ ಎಸ್. ಕುಲಕರ್ಣಿ ಕಾರ್ಯನಿರ್ವಹಿಸಲಿದ್ದಾರೆ.

ಕಲಾಸಕ್ತರು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಮೂರ್ತಿಗಳ ಮಾರಾಟ ವ್ಯವಸ್ಥೆಯು ಆಗಸ್ಟ್ 27ರಿಂದ ಸೆಪ್ಟೆಂಬರ್ 14ರವರೆಗೆ ಇರಲಿದೆ.

Related Articles

Leave a Reply

Your email address will not be published. Required fields are marked *

Back to top button