ವಿಶೇಷ ಸಂಕ್ಷಿಪ್ತ ಮತದಾರರ ಪರಿಷ್ಕರಣೆ: ಜಿಲ್ಲೆಯಲ್ಲಿ 18.49 ಲಕ್ಷ ಮತದಾರರು
5.21 ಲಕ್ಷ ಮತದಾರರು ಎಎಸ್‌ಡಿಓ ಪಟ್ಟಿಗೆ; 1.05 ಲಕ್ಷ ಮತದಾರರಿಗೆ ನೋಟಿಸ್ ನೀಡಿ ಮತಗಟ್ಟೆ ಹಂತದಲ್ಲೇ ವಿಚಾರಣೆ

ಕಲಬುರಗಿ, ಆ.25: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಸಂಕ್ಷಿಪ್ತ ಮತದಾರರ ಪರಿಷ್ಕರಣೆ-2026ರ ಕರಡು ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ 9,40,251 ಪುರುಷರು, 9,09,121 ಮಹಿಳೆಯರು ಹಾಗೂ 213 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 18,49,585 ಮತದಾರರು ಪಟ್ಟಿಯಲ್ಲಿ ನೋಂದಣಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಇಕ್ರಂ ಶರೀಫ್ ತಿಳಿಸಿದ್ದಾರೆ.
ಕರಡು ಪಟ್ಟಿಯಲ್ಲಿ 18ರಿಂದ 19 ವರ್ಷ ವಯೋಮಾನದ 14,125 ಮತದಾರರು ಹಾಗೂ 24,817 ವಿಶೇಷಚೇತನ ಮತದಾರರು ಇದ್ದಾರೆ. ಜನಸಂಖ್ಯೆಗೆ ಹೋಲಿಸಿದರೆ ಮತದಾರರ ಪ್ರಮಾಣ ಶೇ.56.14ರಷ್ಟಿದ್ದು, ಪ್ರತಿ 1,000 ಪುರುಷ ಮತದಾರರಿಗೆ 967 ಮಹಿಳಾ ಮತದಾರರಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಎಸ್‌ಐಆರ್ ಪ್ರಕ್ರಿಯೆ ಆರಂಭಕ್ಕೂ ಮುನ್ನ ಜಿಲ್ಲೆಯಲ್ಲಿ ಒಟ್ಟು 23,71,542 ಮತದಾರರಿದ್ದರು. ಇದೀಗ ಎಸ್‌ಐಆರ್ ಪ್ರಕ್ರಿಯೆ ನಂತರದ ಕರಡು ಪಟ್ಟಿಯಲ್ಲಿ 18,49,585 ಮತದಾರರು ಮಾತ್ರ ಉಳಿದಿದ್ದು, ಇದು ಶೇ.77.99ರಷ್ಟಾಗಿದೆ.
ಪರಿಷ್ಕರಣೆ ವೇಳೆ 71,691 ಮತದಾರರು ಮೃತಪಟ್ಟಿರುವುದು, 47,445 ಮತದಾರರು ಮನೆಯಲ್ಲಿ ಲಭ್ಯವಿಲ್ಲದಿರುವುದು, 3,47,606 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, 21,816 ಮತದಾರರು ಇತರೆ ಕಾರಣಗಳಿಗೆ ಒಳಪಟ್ಟಿರುವುದು ಹಾಗೂ 33,399 ಮತದಾರರು ಈಗಾಗಲೇ ನೋಂದಣಿಯಾಗಿರುವುದು ಪತ್ತೆಯಾಗಿದೆ. ಹೀಗಾಗಿ ಒಟ್ಟು 5,21,957 ಮತದಾರರನ್ನು ಎಎಸ್‌ಡಿಓ ಎಂದು ಗುರುತಿಸಿ ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಇಕ್ರಂ ಶರೀಫ್ ತಿಳಿಸಿದರು.
ಮನೆಮನೆಗೆ ತೆರಳಿ ಎಸ್‌ಐಆರ್ ಪ್ರಕ್ರಿಯೆ
ಜೂನ್ 30ರಿಂದ ಆಗಸ್ಟ್ 17ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸಿ, ಮತದಾರರಿಂದ ಮರಳಿ ಪಡೆದು ಗಣಕೀಕರಣ ಮಾಡಿದ ನಂತರ ಈ ಅಂಕಿ-ಅಂಶಗಳು ಹೊರಬಿದ್ದಿವೆ.
ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಕಚೇರಿ, ಸಹಾಯಕ ಆಯುಕ್ತರ ಕಚೇರಿ, ತಹಶೀಲ್ದಾರ್ ಕಚೇರಿ, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಜಿಲ್ಲೆಯ ಎಲ್ಲ ಮತಗಟ್ಟೆ ಅಧಿಕಾರಿಗಳ ಕಚೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಚುನಾವಣಾ ಆಯೋಗದ ಅಧಿಕೃತ ಜಾಲತಾಣದಲ್ಲಿಯೂ ಪಟ್ಟಿ ಲಭ್ಯವಿದೆ.
ಕರಡು ಪಟ್ಟಿಯನ್ನು ಸಾರ್ವಜನಿಕರು ಪರಿಶೀಲಿಸಿ ಯಾವುದೇ ಆಕ್ಷೇಪಣೆಗಳಿದ್ದರೆ ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 23ರೊಳಗೆ ಸಲ್ಲಿಸಬಹುದು. ಸ್ವೀಕೃತ ಆಕ್ಷೇಪಣೆಗಳನ್ನು ಅಕ್ಟೋಬರ್ 22ರೊಳಗೆ ವಿಲೇವಾರಿ ಮಾಡಿ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
1.05 ಲಕ್ಷ ಮತದಾರರಿಗೆ ನೋಟಿಸ್
ಪ್ರಕಟಿತ ಕರಡು ಪಟ್ಟಿಯಲ್ಲಿ ಹೆಸರು ಹೊಂದಿದ್ದರೂ 2002ರ ಎಸ್‌ಐಆರ್ ಪಟ್ಟಿಯ ಮಾಹಿತಿ ನೀಡದ 53,788 ಮತದಾರರನ್ನು ‘ನೋ ಮ್ಯಾಪಿಂಗ್’ ಹಾಗೂ 2002ರ ಎಸ್‌ಐಆರ್ ಪಟ್ಟಿಯ ದಾಖಲೆಗಳಿಗೆ ತಾಳೆಯಾಗದ 51,705 ಮತದಾರರನ್ನು ‘ಅನೋಮಲೀಸ್’ ಎಂದು ಪರಿಗಣಿಸಲಾಗಿದೆ.
ಇಂತಹ ಒಟ್ಟು 1,05,493 ಮತದಾರರಿಗೆ ನೋಟಿಸ್ ನೀಡಿ ಅಕ್ಟೋಬರ್ 22ರವರೆಗೆ ಮತಗಟ್ಟೆ ಹಂತದಲ್ಲಿಯೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗುತ್ತದೆ. ತ್ವರಿತ ವಿಚಾರಣೆ ನಡೆಸಿ ಪ್ರಕರಣಗಳನ್ನು ವಿಲೇವಾರಿ ಮಾಡಲು ಈಗಿರುವ 9 ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳ ಜೊತೆಗೆ ಹೆಚ್ಚುವರಿಯಾಗಿ 77 ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಇಕ್ರಂ ಶರೀಫ್ ತಿಳಿಸಿದರು.
ವಯಸ್ಸಿನ ಆಧಾರದ ಮೇಲೆ ದಾಖಲೆ ಸಲ್ಲಿಕೆ
ನೋಟಿಸ್ ಪಡೆದ ಮತದಾರರು 1987ರ ಜುಲೈ 1ಕ್ಕಿಂತ ಮೊದಲು ಭಾರತದಲ್ಲಿ ಜನಿಸಿದ್ದರೆ, ತಮ್ಮ ಜನ್ಮ ದಿನಾಂಕ ಅಥವಾ ಜನ್ಮಸ್ಥಳವನ್ನು ದೃಢೀಕರಿಸುವ ಚುನಾವಣಾ ಆಯೋಗ ನಿಗದಿಪಡಿಸಿರುವ 12 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಬೇಕು.
1987ರ ಜುಲೈ 1ರಿಂದ 2004ರ ಡಿಸೆಂಬರ್ 2ರ ನಡುವೆ ಭಾರತದಲ್ಲಿ ಜನಿಸಿದವರು ತಮ್ಮ ಜನ್ಮ ದಿನಾಂಕವನ್ನು ದೃಢೀಕರಿಸುವ ದಾಖಲೆಯ ಜೊತೆಗೆ ತಂದೆ ಅಥವಾ ತಾಯಿಯ ಜನ್ಮ ದಿನಾಂಕ ಅಥವಾ ಜನ್ಮಸ್ಥಳವನ್ನು ದೃಢೀಕರಿಸುವ ನಿಗದಿತ ದಾಖಲೆಗಳ ಪೈಕಿ ಒಂದನ್ನು ಸಲ್ಲಿಸಬೇಕು.
2004ರ ಡಿಸೆಂಬರ್ 2ರ ನಂತರ ಭಾರತದಲ್ಲಿ ಜನಿಸಿದವರು ತಮ್ಮ ಜನ್ಮ ದಿನಾಂಕವನ್ನು ದೃಢೀಕರಿಸುವ ದಾಖಲೆಯ ಜೊತೆಗೆ ತಂದೆ ಮತ್ತು ತಾಯಿಯ ಜನ್ಮ ದಿನಾಂಕ ಅಥವಾ ಜನ್ಮಸ್ಥಳವನ್ನು ದೃಢೀಕರಿಸುವ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕ್ಷೇತ್ರವಾರು ಮತದಾರರ ವಿವರ
| ವಿಧಾನಸಭಾ ಕ್ಷೇತ್ರ | ಪುರುಷರು | ಮಹಿಳೆಯರು | ತೃತೀಯ ಲಿಂಗಿಗಳು | ಒಟ್ಟು |
|---|---|---|---|---|
| ಅಫಜಲಪುರ | 1,05,645 | 98,738 | 18 | 2,04,401 |
| ಜೇವರ್ಗಿ | 1,10,580 | 1,05,253 | 13 | 2,15,846 |
| ಚಿತ್ತಾಪುರ | 98,756 | 96,956 | 14 | 1,95,726 |
| ಸೇಡಂ | 96,875 | 98,391 | 29 | 1,95,295 |
| ಚಿಂಚೋಳಿ | 94,574 | 89,849 | 10 | 1,84,433 |
| ಗುಲಬರ್ಗಾ ಗ್ರಾಮೀಣ | 1,14,753 | 1,06,739 | 21 | 2,21,513 |
| ಗುಲಬರ್ಗಾ ದಕ್ಷಿಣ | 96,481 | 1,00,008 | 33 | 1,96,522 |
| ಗುಲಬರ್ಗಾ ಉತ್ತರ | 1,14,271 | 1,15,685 | 41 | 2,29,997 |
| ಆಳಂದ | 1,08,316 | 97,502 | 34 | 2,05,852 |
ಅರ್ಹರಿಗೆ ಮತಪಟ್ಟಿಗೆ ಸೇರ್ಪಡೆಗೆ ಅವಕಾಶ
ಕರಡು ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ಮತದಾರರ ಹೆಸರು ಹೊರಗುಳಿದಿದ್ದರೆ, ನಮೂನೆ-6 ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಲು ಅರ್ಜಿ ಸಲ್ಲಿಸಬಹುದು. ಈ ಪ್ರಕ್ರಿಯೆ ನಿರಂತರವಾಗಿದ್ದು, ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅರ್ಹ ಮತದಾರರಿಂದ ಸಲ್ಲಿಕೆಯಾಗುವ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಅರ್ಹರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಇಕ್ರಂ ಶರೀಫ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಹಾಗೂ ಪ್ರೊಬೇಷನರ್ ಐಎಎಸ್ ಅಧಿಕಾರಿ ಶಿಖರ್ ಮೋಘಾ ಉಪಸ್ಥಿತರಿದ್ದರು.



