ಜಿಲ್ಲಾಸುದ್ದಿ

ವಿದ್ಯುತ್ ಅವಘಡಕ್ಕೆ ಕಾಲುಗಳನ್ನು ಕಳೆದುಕೊಂಡ ಸೆಂಟ್ರಿಂಗ್ ಕೆಲಸಗಾರ: ಪರಿಹಾರಕ್ಕೆ ಆಗ್ರಹ

ಸೂಕ್ತ ಪರಿಹಾರ ಮಂಜೂರು ಮಾಡಿ, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

ಕಲಬುರಗಿ, ಆ.25: ಸೆಂಟ್ರಿಂಗ್ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಕೈಕಾಲುಗಳನ್ನು ಕಳೆದುಕೊಂಡ ಕಮಲಾಪುರ ತಾಲೂಕಿನ ಹೊಳಕುಂದಾ ಗ್ರಾಮದ ಸೆಂಟ್ರಿಂಗ್ ಕೆಲಸಗಾರ ಇಮಾಮ್ ಪಟೇಲ್ ಅವರಿಗೆ ಸೂಕ್ತ ಪರಿಹಾರಧನ ಮಂಜೂರು ಮಾಡಬೇಕು ಹಾಗೂ ಘಟನೆಗೆ ಕಾರಣರಾದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೆಂಟ್ರಿಂಗ್ ಕಟ್ಟಡ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಕಮಲಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಹಿರಿಯ ಕಾರ್ಮಿಕ ಮುಖಂಡ ಶಂಕರ ಕಟ್ಟಿಸಂಗಾವಿ, ಅಲ್ಲಾವುದ್ದೀನ್, ಮೊಹಮ್ಮದ್ ಶೇರ್ ಅಲಿ, ಅಯೂಬ್‌ಖಾನ್ ಸೇರಿದಂತೆ ಹಲವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರತಿಭಟನಾಕಾರರು ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಯಾವುದೇ ನಿಯಮ ಉಲ್ಲಂಘನೆ ಅಥವಾ ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯಲೋಪ ಕಂಡುಬಂದಲ್ಲಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿದ್ಯುತ್ ಅವಘಡಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಬೇಕು. ಘಟನೆ ನಡೆದ ಸ್ಥಳದ ಪರಿಶೀಲನೆ ನಡೆಸಿ, ವಿದ್ಯುತ್ ಮಾರ್ಗಗಳ ಸ್ಥಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯನ್ನು ತನಿಖೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಜೆಸ್ಕಾಂ ಹಾಗೂ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯ ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸೂಕ್ತ ತನಿಖೆ ನಡೆಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ವಿದ್ಯುತ್ ಅವಘಡದಲ್ಲಿ ಸಂತ್ರಸ್ತರಾದ ಇಮಾಮ್ ಪಟೇಲ್ ಹಾಗೂ ದಸ್ತಗೀರ್ ಅವರಿಗೆ ಸರ್ಕಾರದ ನಿಯಮಾನುಸಾರ ತಕ್ಷಣ ಸೂಕ್ತ ಪರಿಹಾರಧನ ಮಂಜೂರು ಮಾಡಬೇಕು. ಅಲ್ಲದೆ, ಸಂತ್ರಸ್ತರ ಮುಂದಿನ ಜೀವನೋಪಾಯ ಹಾಗೂ ಪುನರ್ವಸತಿಗಾಗಿ ಅಗತ್ಯವಿರುವ ವಿಶೇಷ ನೆರವು ಮತ್ತು ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button