ನಿವೇಶನ ಹಕ್ಕುಪತ್ರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಆ.25ರಂದು ಕಲಬುರಗಿ ಪಾಲಿಕೆ ಮುಂದೆ ಧರಣಿ
381 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಹಾಗೂ ಹಾಸ್ಟೆಲ್ ಕಾರ್ಮಿಕರಿಗೆ ವಸತಿ ಕಲ್ಪಿಸಲು ಒತ್ತಾಯ

ಕಲಬುರಗಿ, ಆ.20- ನಿವೇಶನಗಳ ಹಕ್ಕುಪತ್ರ ವಿತರಣೆ, ಲೇಔಟ್ ಅಭಿವೃದ್ಧಿ ಹಾಗೂ ಹಾಸ್ಟೆಲ್ ಕಾಲೋನಿ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ.25ರಂದು ಮಹಾನಗರ ಪಾಲಿಕೆ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕೃಷಿ ಹಾಗೂ ಗ್ರಾಮೀಣ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಯ ತಾಜ್‌ಸುಲ್ತಾನ್‌ಪುರದ ಸರ್ವೇ ನಂಬರ್‌ಗಳಿಗೆ ಸಂಬಂಧಿಸಿದಂತೆ ಸುಮಾರು 20 ವರ್ಷಗಳ ಹಿಂದೆ ವಸತಿ ರಹಿತರ ಸಂಖ್ಯೆ 264/ಪಿ ಅಡಿಯಲ್ಲಿ 9 ಎಕರೆ 24 ಗುಂಟೆ ಜಮೀನಿನಲ್ಲಿ 381 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿತ್ತು. ಆದರೆ, ನಂತರ ಈ ಪ್ರಕರಣದ ವಿಚಾರವಾಗಿ ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟವರ ನಡುವೆ ದೀರ್ಘಕಾಲ ಕಾನೂನು ಹೋರಾಟ ನಡೆದಿತ್ತು. ಅಂತಿಮವಾಗಿ 2021ರ ಫೆಬ್ರವರಿ 18ರಂದು ನ್ಯಾಯಾಲಯ ತೀರ್ಪು ನೀಡಿ ದಾವೆಯನ್ನು ವಜಾಗೊಳಿಸಿದೆ ಎಂದು ಹೇಳಿದರು.
ಹೀಗಾಗಿ 381 ಫಲಾನುಭವಿಗಳಿಗೆ ನಿವೇಶನಗಳ ಹಕ್ಕುಪತ್ರ ವಿತರಿಸಲು ಯಾವುದೇ ಕಾನೂನು ತೊಂದರೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಇಷ್ಟೊಂದು ವರ್ಷಗಳಿಂದ ನಿವೇಶನಕ್ಕಾಗಿ ಕಾಯುತ್ತಿರುವ ಫಲಾನುಭವಿಗಳು ಮನೆ ನಿರ್ಮಾಣಕ್ಕಾಗಿ ಮೂಲ ಶುಲ್ಕವಾಗಿ ತಲಾ 10 ಸಾವಿರ ರೂ. ಪಾವತಿಸಿದ್ದಾರೆ. ಆದ್ದರಿಂದ ಕೂಡಲೇ ಹಕ್ಕುಪತ್ರಗಳನ್ನು ವಿತರಿಸಬೇಕು ಎಂದು ಭೀಮಶೆಟ್ಟಿ ಯಂಪಳ್ಳಿ ಆಗ್ರಹಿಸಿದರು.
ಇದಲ್ಲದೆ, ನಗರದ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಸುಮಾರು 250 ಬಡವರು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಬಹುತೇಕರು ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದು, ಪ್ರತಿ ತಿಂಗಳು ವೇತನ ವಿಳಂಬವಾಗುವುದರಿಂದ ಬಾಡಿಗೆ ಪಾವತಿಸಲು ತೊಂದರೆ ಅನುಭವಿಸುತ್ತಿದ್ದಾರೆ.
ಹೀಗಾಗಿ ಸರ್ಕಾರ ನಗರದ ಆಸುಪಾಸಿನಲ್ಲಿ ಹಾಸ್ಟೆಲ್ ಕಾಲೋನಿ ನಿರ್ಮಿಸಿ, ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಮನೆಗಳನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ನಿವೇಶನ ಹಕ್ಕುಪತ್ರ ವಿತರಣೆ, ಲೇಔಟ್ ಅಭಿವೃದ್ಧಿ ಹಾಗೂ ಹಾಸ್ಟೆಲ್ ಕಾರ್ಮಿಕರಿಗೆ ವಸತಿ ಸೇರಿದಂತೆ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆ.25ರಂದು ಮಹಾನಗರ ಪಾಲಿಕೆ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಮಲಾಬಾಯಿ ಹಿರೇಮಠ, ಮೊಹಮ್ಮದ್ ಜಮೀನುದ್ದೀನ್ ಬಾಬಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



