ಅಪರಾಧ

ಕಲಬುರಗಿ ಜೈಲಿನಿಂದ ಪರಾರಿಯಾಗಿದ್ದ ಮೂರನೇ ಆರೋಪಿ ಮಸ್ತಾನ್ ಸೆರೆ

ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ; ಮೂವರು ಆರೋಪಿಗಳೂ ಪೊಲೀಸರ ವಶಕ್ಕೆ

ಕಲಬುರಗಿ, ಆ.20- ನಗರದ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಶಿಕ್ಷಾ ಕೈದಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಮಾರು ಒಂದು ತಿಂಗಳ ಸತತ ಹುಡುಕಾಟದ ಬಳಿಕ ಮೂರನೇ ಹಾಗೂ ಪ್ರಮುಖ ಆರೋಪಿ ಮಸ್ತಾನ್‌ನನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ಆರೋಪಿ ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಜೈಲಿನಿಂದ ಪರಾರಿಯಾಗಿದ್ದ ಮೂವರು ಶಿಕ್ಷಾ ಕೈದಿಗಳನ್ನೂ ಪೊಲೀಸರು ಬಂಧಿಸಿದಂತಾಗಿದೆ.

ಕಳೆದ ಜುಲೈ 14ರಂದು ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಶಿಕ್ಷಾ ಕೈದಿಗಳು ಕಾವಲುಗಾರರ ಕಣ್ತಪ್ಪಿಸಿ ಪರಾರಿಯಾಗಿದ್ದರು. ಈ ಘಟನೆ ಜೈಲು ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.

ಪರಾರಿಯಾಗಿದ್ದ ಕೈದಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂತೋಷ್ ಹಾಗೂ ಸಾಗರ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.

ಇದೀಗ ಪ್ರಕರಣದ ಪ್ರಮುಖ ಹಾಗೂ ಕೊನೆಯ ಆರೋಪಿಯಾಗಿದ್ದ ಮಸ್ತಾನ್‌ನನ್ನು ರಾಜೇಶ್ವರ ಗ್ರಾಮದಲ್ಲಿ ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪರಾರಿಯಾಗಿದ್ದ ಮೂವರೂ ಕೈದಿಗಳು ಪೊಲೀಸರ ವಶಕ್ಕೆ ಬಂದಿದ್ದು, ಪ್ರಕರಣದ ತನಿಖೆಗೆ ಮಹತ್ವದ ಮುನ್ನಡೆ ದೊರೆತಿದೆ.

ಬಂಧಿತ ಆರೋಪಿ ಮಸ್ತಾನ್‌ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button