ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಲಿ: ಪಿ.ಟಿ. ಪರಮೇಶ್ವರ ನಾಯ್ಕ
ಕರ್ತವ್ಯ ಲೋಪವೆಸಗಿದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ: ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

ಕಲಬುರಗಿ, ಆ.18: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳು ಜಿಲ್ಲೆಯ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪುವಂತೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕರ್ತವ್ಯ ಲೋಪ ಅಥವಾ ಉದಾಸೀನತೆ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಹೊಸ ಸಭಾಂಗಣದಲ್ಲಿ ಮಂಗಳವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಒಟ್ಟು 5,97,957 ಫಲಾನುಭವಿಗಳು ನೋಂದಣಿಯಾಗಿದ್ದಾರೆ. ವಿವಿಧ ತಾಲೂಕುಗಳಲ್ಲಿ ಯೋಜನೆಯ ಸೌಲಭ್ಯ ವಿತರಿಸಲಾಗುತ್ತಿದೆ. ಯೋಜನೆಯಡಿ ನೋಂದಾಯಿಸಿಕೊಂಡು ಮೃತಪಟ್ಟಿರುವ 9,156 ಫಲಾನುಭವಿಗಳ ಪ್ರಕರಣಗಳಲ್ಲಿ ಈಗಾಗಲೇ ₹2.14 ಕೋಟಿ ವಸೂಲಿ ಮಾಡಿ ಸರ್ಕಾರದ ಖಜಾನೆಗೆ ಜಮೆ ಮಾಡಲಾಗಿದೆ. ಬಾಕಿ ಉಳಿದಿರುವ ಸುಮಾರು ₹2.12 ಕೋಟಿ ಮೊತ್ತವನ್ನು ತಕ್ಷಣ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 32,943 ನಿರುದ್ಯೋಗಿಗಳು ನೋಂದಾಯಿಸಿಕೊಂಡಿದ್ದು, ಇದರಲ್ಲಿ 32,289 ಪದವೀಧರರು ಸೇರಿದ್ದಾರೆ. 15,690 ಮಹಿಳೆಯರು ಹಾಗೂ 17,253 ಪುರುಷರು ನೋಂದಾಯಿಸಿಕೊಂಡಿದ್ದಾರೆ. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಯೋಜನೆಯ ಕುರಿತು ಹೆಚ್ಚಿನ ಜಾಗೃತಿ ಮೂಡಿಸಿ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ ಜೆಸ್ಕಾಂ ವ್ಯಾಪ್ತಿಯಲ್ಲಿ 10.50 ಲಕ್ಷಕ್ಕೂ ಹೆಚ್ಚು ಗ್ರಾಹಕರ ನೋಂದಣಿ ಪೂರ್ಣಗೊಂಡಿದೆ. ಪ್ರತ್ಯೇಕ ಮೀಟರ್ ಇಲ್ಲದ ಕಡೆ ಹೊಸ ಮೀಟರ್ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ 21.22 ಲಕ್ಷ ಫಲಾನುಭವಿಗಳಿಗೆ ಪ್ರತಿ ತಿಂಗಳು 7 ಕೆಜಿ ಅಕ್ಕಿ ಹಾಗೂ 3 ಕೆಜಿ ಜೋಳ ವಿತರಿಸಲಾಗುತ್ತಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಶಕ್ತಿ ಯೋಜನೆಯಿಂದಾಗಿ ಕೆಕೆಆರ್‌ಟಿಸಿಯ ಲೋಡ್ ಫ್ಯಾಕ್ಟರ್ ಶೇ.85ಕ್ಕೆ ಏರಿಕೆಯಾಗಿದೆ. ಸಂಸ್ಥೆಗೆ ಹೊಸದಾಗಿ 400 ಬಸ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಸರ್ಕಾರದ ಆರನೇ ಯೋಜನೆಯಾಗಿ ಜಾರಿಗೊಳಿಸಿರುವ ಉಚಿತ ಬಸ್ ಪಾಸ್ ಯೋಜನೆಯಡಿ ಜಿಲ್ಲೆಯಲ್ಲಿ 1,85,460 ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಲಾಗಿದೆ ಎಂದು ತಿಳಿಸಲಾಯಿತು.
ಬ್ಯಾಂಕ್ ಖಾತೆಗಳ ಎನ್‌ಪಿಸಿಐ ಮ್ಯಾಪಿಂಗ್, ವೋಟರ್ ಐಡಿ ಹಾಗೂ ತೆರಿಗೆದಾರರೆಂದು ತಪ್ಪಾಗಿ ನಮೂದಾಗಿರುವ ಕಾರಣ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿರುವ ಬಡ ಕೂಲಿ ಕಾರ್ಮಿಕರ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
ಬಸ್ ನಿಲ್ದಾಣಗಳಲ್ಲಿ ಸಿಸಿಟಿವಿ ವ್ಯವಸ್ಥೆ, ಸ್ವಚ್ಛತೆ ಹಾಗೂ ಏಕರೂಪದ ಶೌಚಾಲಯ ಶುಲ್ಕ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ. ಸುಶೀಲಾ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶರಣಪ್ಪ ಸಂಕನೂರ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾ ನಿರ್ದೇಶಕಿ (ಪ್ರಭಾರ) ಮದುಮತಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ವಿಜಯಕುಮಾರ ಕಟ್ಟಿಮನಿ, ಸೋಮಶೇಖರ ಹಿರೇಮಠ, ನರಸಿಂಹಲು ಕುಂಬಾರ, ನಿರ್ಮಲ ಬರಗಾಲೆ, ಸುರೇಶ ತಿಪ್ಪಶೆಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.



