ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳಿಗೆ ₹5,561 ಕೋಟಿ ವಿನಿಯೋಗ
ಸೆಪ್ಟೆಂಬರ್ ಅಂತ್ಯದೊಳಗೆ ಮನೆ-ಮನೆ ಸರ್ವೇ; ಅಧಿವೇಶನದ ಬಳಿಕ ಬೃಹತ್ ಕಾರ್ಯಾಗಾರ: ಪಿ.ಟಿ. ಪರಮೇಶ್ವರ ನಾಯ್ಕ

ಕಲಬುರಗಿ, ಆ.18: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಡಿ ಕಲಬುರಗಿ ಜಿಲ್ಲೆಗೆ ಒಟ್ಟು ₹5,561.81 ಕೋಟಿ ಅನುದಾನ ವಿನಿಯೋಗಿಸಲಾಗಿದ್ದು, ಸಣ್ಣಪುಟ್ಟ ತಾಂತ್ರಿಕ ಲೋಪಗಳನ್ನು ಸರಿಪಡಿಸಿ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಯೋಜನೆಗಳ ಸೌಲಭ್ಯ ತಲುಪಿಸಲು ಸರ್ಕಾರ ಬದ್ಧವಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಹೊಸ ಸಭಾಂಗಣದಲ್ಲಿ ಮಂಗಳವಾರ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಬೃಹತ್ ಪ್ರಮಾಣದ ಅನುದಾನ ಜನರಿಗೆ ತಲುಪಿದೆ. ಯೋಜನೆಗಳ ಕುರಿತು ಫಲಾನುಭವಿಗಳಿಗೆ ಹೆಚ್ಚಿನ ಅರಿವು ಮೂಡಿಸಲು ಅಧಿವೇಶನದ ಬಳಿಕ ಕಲಬುರಗಿಯಲ್ಲಿ ಬೃಹತ್ ಜಿಲ್ಲಾ ಮಟ್ಟದ ಕಾರ್ಯಾಗಾರ ಆಯೋಜಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 5.97 ಲಕ್ಷ ಫಲಾನುಭವಿಗಳಿಗೆ ₹3,186.55 ಕೋಟಿ ನೇರ ವರ್ಗಾವಣೆಯಾಗಿದೆ. ಗೃಹಜ್ಯೋತಿ ಯೋಜನೆಯಡಿ 5.65 ಲಕ್ಷಕ್ಕೂ ಅಧಿಕ ಗ್ರಾಹಕರ ಉಚಿತ ವಿದ್ಯುತ್‌ಗಾಗಿ ₹910.98 ಕೋಟಿ, ಶಕ್ತಿ ಯೋಜನೆಯಡಿ 22.66 ಕೋಟಿ ಮಹಿಳೆಯರ ಉಚಿತ ಪ್ರಯಾಣಕ್ಕೆ ₹795.64 ಕೋಟಿ, ಅನ್ನಭಾಗ್ಯ ಯೋಜನೆಯಡಿ ₹508.72 ಕೋಟಿ ಹಾಗೂ ಯುವನಿಧಿ ಯೋಜನೆಯಡಿ ನೋಂದಾಯಿತ 32,943 ನಿರುದ್ಯೋಗಿ ಯುವಕ-ಯುವತಿಯರಿಗೆ ₹160.41 ಕೋಟಿ ನೇರ ನೆರವು ನೀಡಲಾಗಿದೆ ಎಂದು ತಿಳಿಸಿದರು.
ದತ್ತಾಂಶದಲ್ಲಿ ವ್ಯತ್ಯಾಸ
ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಡಿಸಲಾದ ಅಂಕಿ-ಅಂಶಗಳಲ್ಲಿ ಕೆಲವು ತಾಂತ್ರಿಕ ವ್ಯತ್ಯಾಸಗಳು ಕಂಡುಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು ಜೆಸ್ಕಾಂ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಂದ ನಿಖರ ದತ್ತಾಂಶ ಪಡೆದು ಸುಧಾರಿತ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯ ಹೊಸ ಸರ್ವೇ ಸಂದರ್ಭದಲ್ಲಿ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬಂದಿರುವ ವಲಸಿಗರು ಹಾಗೂ ಬಾಡಿಗೆದಾರರಿಗೆ ಎದುರಾಗುತ್ತಿರುವ ತೊಡಕುಗಳನ್ನು ನಿವಾರಿಸಲಾಗುವುದು. ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮುಖ್ಯಮಂತ್ರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸೆಪ್ಟೆಂಬರ್ ಅಂತ್ಯದೊಳಗೆ ಸರ್ವೇ
ಯಾವುದೇ ಅರ್ಹ ಫಲಾನುಭವಿಗೆ ಅನ್ಯಾಯವಾಗದಂತೆ ತಾಲೂಕು ಹಾಗೂ ಹೋಬಳಿ ಮಟ್ಟದ ಗ್ಯಾರಂಟಿ ಸಮಿತಿಗಳು ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸಲಿವೆ. ಈ ಸರ್ವೇ ಪ್ರಕ್ರಿಯೆಯನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಪರಮೇಶ್ವರ ನಾಯ್ಕ ತಿಳಿಸಿದರು.
ಬ್ಯಾಂಕ್ ಖಾತೆಗಳಲ್ಲಿ ಜಮೆಯಾಗಿದ್ದ ಮೃತ ಫಲಾನುಭವಿಗಳ ಹಣದಲ್ಲಿ ರಾಜ್ಯಾದ್ಯಂತ ₹40 ಕೋಟಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ₹2 ಕೋಟಿ ಹಣವನ್ನು ಸರ್ಕಾರದ ಖಾತೆಗೆ ಹಿಂಪಡೆಯಲಾಗಿದೆ. ಯಾವುದೇ ರೀತಿಯ ಅಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಸ್ತೆ ಅಭಿವೃದ್ಧಿಗೆ ಕ್ರಮ
ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಸಂಪರ್ಕದ ಕೊರತೆಯಿಂದ ಬಸ್ ಸಂಚಾರ ಸಾಧ್ಯವಾಗುತ್ತಿಲ್ಲ. ಕೆಎಸ್‌ಆರ್‌ಟಿಸಿ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಅಗತ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸಾರಿಗೆ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 1,85,485 ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸಲಾಗಿದ್ದು, ರಾಜ್ಯದಲ್ಲೇ ಕಲಬುರಗಿ ಜಿಲ್ಲೆ ಗರಿಷ್ಠ ಸಾಧನೆ ಮಾಡಿದೆ ಎಂದು ಅವರು ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ವಿಜಯಕುಮಾರ ಕಟ್ಟಿಮನಿ, ಸೋಮಶೇಖರ ಹಿರೇಮಠ, ನರಸಿಂಹಲು ಕುಂಬಾರ, ನಿರ್ಮಲ ಬರಗಾಲೆ, ಸುರೇಶ ತಿಪ್ಪಶೆಟ್ಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.



