ಸಾಹಿತ್ಯ ಪರಿಚಾರಕ ಪ್ರಶಸ್ತಿ ಪುರಸ್ಕೃತ ಹಾರಕೂಡ ಶ್ರೀಗಳಿಗೆ ಸನ್ಮಾನ
ಕಲೆ, ಸಾಹಿತ್ಯ, ಸಂಗೀತ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಡಾ. ಚೆನ್ನವೀರ ಶಿವಾಚಾರ್ಯರ ಸೇವೆ ಅನನ್ಯ: ವಿಜಯಕುಮಾರ ಪಾಟೀಲ

ಕಲಬುರಗಿ, ಆ.19: ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಾರಕೂಡದ ಡಾ. ಚೆನ್ನವೀರ ಶಿವಾಚಾರ್ಯರು ಕಲೆ, ಸಾಹಿತ್ಯ, ಸಂಗೀತ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆ ಅನನ್ಯವಾಗಿದೆ. ಈ ಭಾಗದ ಯುವ ಬರಹಗಾರರು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ರಾಜ್ಯಮಟ್ಟದ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಾರಕೂಡ ಶ್ರೀಗಳಿಗೆ ವಿಶೇಷವಾಗಿ ಗೌರವಿಸಿ ಅವರು ಮಾತನಾಡಿದರು.
ಡಾ. ಚೆನ್ನವೀರ ಶಿವಾಚಾರ್ಯರು ಬಸವಾದಿ ಶರಣರ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಹಾಗೂ ಸಮಾಜದಲ್ಲಿ ಸಮಾನತೆಯ ಸಂದೇಶ ಸಾರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶರಣರ ಆಶಯದಂತೆ ಎಲ್ಲರನ್ನೂ ಸಮಾನವಾಗಿ ಕಾಣುವ ಸಾಹಿತ್ಯಿಕ ಚಿಂತನೆ ಶ್ರೀಮಠದ ಪರಂಪರೆಯಾಗಿದೆ ಎಂದು ವಿಜಯಕುಮಾರ ಪಾಟೀಲ ಹೇಳಿದರು.
ನೂರಾರು ಸಾಹಿತ್ಯಿಕ ಗ್ರಂಥಗಳನ್ನು ಪ್ರಕಟಿಸುವ ಮೂಲಕ ಪುಸ್ತಕ ಪ್ರೀತಿಯನ್ನು ಹೆಚ್ಚಿಸುವ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ. ನಾಡು-ನುಡಿ, ನೆಲ-ಜಲ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಅವರ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದು ಕಲ್ಯಾಣ ಕರ್ನಾಟಕದ ಸಾಹಿತ್ಯ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಡಾ. ಶ್ರೀಶೈಲ ನಾಗರಾಳ, ಮುಡುಬಿ ಗುಂಡೇರಾವ್, ಪರಿಷತ್ ಜಿಲ್ಲಾ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ಡಾ. ಬಾಬುರಾವ್ ಶೇರಿಕಾರ, ವಿದ್ಯಾಸಾಗರ ದೇಶಮುಖ, ಕಲ್ಯಾಣಕುಮಾರ ಶೀಲವಂತ, ಧರ್ಮರಾಜ ಜವಳಿ, ಜಗದೀಶ ಮರಪಳ್ಳಿ, ಬಿ.ಎಂ. ಪಾಟೀಲ ಕಲೂರ್, ರಾಜೇಂದ್ರ ಮಾಡಬೂಳ್, ಸಿದ್ದಲಿಂಗ ಬಾಳಿ, ಸೋಮಶೇಖರಯ್ಯ ಹೊಸಮಠ, ಸೋಮಶೇಖರ ನಂದಿಧ್ವಜ, ಮಹಾಲಿಂಗಯ್ಯ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



