ದ್ವಿಭಾಷಾ ಶಿಕ್ಷಣ ನೀತಿ ಮರುಪರಿಶೀಲಿಸಿ: ರಾಷ್ಟ್ರಪತಿಗೆ ಮನವಿ
ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಅಖಿಲ ಭಾರತ ಸಾಹಿತ್ಯ ಪರಿಷತ್ ಕರ್ನಾಟಕ ಘಟಕದ ಆಗ್ರಹ

ಕಲಬುರಗಿ, ಆ.17: ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಐದನೇ ತರಗತಿಯವರೆಗೆ ಜಾರಿಗೊಳಿಸಿರುವ ದ್ವಿಭಾಷಾ ಶಿಕ್ಷಣ ನೀತಿಯನ್ನು ಮರುಪರಿಶೀಲಿಸಿ, ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಆಗ್ರಹಿಸಿ ಅಖಿಲ ಭಾರತ ಸಾಹಿತ್ಯ ಪರಿಷತ್ ಕರ್ನಾಟಕದ ಪದಾಧಿಕಾರಿಗಳಾದ ಶಿವಶರಣ ಗೋಡ್ರಾಳ, ಅನಿಲ್ ಕುಮಾರ್ ಸಕ್ರಿ, ವಿನುತಾ ಜೋಶಿ ಹಾಗೂ ನಾಗವೇಣಿ ಅವರು ಸೋಮವಾರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಸರ್ಕಾರವು 2026-27ನೇ ಶೈಕ್ಷಣಿಕ ವರ್ಷದಿಂದ 15 ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಐದನೇ ತರಗತಿಯವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ದ್ವಿಭಾಷಾ ಬೋಧನೆ ಜಾರಿಗೊಳಿಸಿರುವುದರಿಂದ ಹಲವು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಕನ್ನಡ ಮಾಧ್ಯಮದಲ್ಲಿ ಬೋಧಿಸುತ್ತಿರುವ ಶಿಕ್ಷಕರಿಗೆ ಇಂಗ್ಲಿಷ್‌ನಲ್ಲಿ ಬೋಧಿಸಲು ತರಬೇತಿ ನೀಡಿರುವುದು, ಕೆಲವು ವಿಷಯಗಳಲ್ಲಿ ಇಂಗ್ಲಿಷ್‌ಗೆ ಹೆಚ್ಚಿನ ಆದ್ಯತೆ ನೀಡಿರುವುದು ಹಾಗೂ ಕನ್ನಡದಲ್ಲಿ ಉತ್ತರಿಸುವ ವಿದ್ಯಾರ್ಥಿಗಳಿಗೆ ಕಡಿಮೆ ಶ್ರೇಯಾಂಕ ನೀಡುವ ಸೂಚನೆಗಳು ಕನ್ನಡ ಭಾಷೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಭಾಷಾವಾರು ರಾಜ್ಯ ರಚನೆಯ ಆಶಯ, ಕರ್ನಾಟಕದ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆ ಹಾಗೂ ಮಕ್ಕಳ ಕಲಿಕೆಯ ಮೂಲಭೂತ ಹಂತದಲ್ಲಿ ಮಾತೃಭಾಷೆಯ ಮಹತ್ವವನ್ನು ಪರಿಗಣಿಸಬೇಕು. ಮಾತೃಭಾಷೆಯ ಮೂಲಕ ಮಕ್ಕಳ ಆಲೋಚನಾ ಸಾಮರ್ಥ್ಯ ಮತ್ತು ಕಲಿಕೆಯ ಬೆಳವಣಿಗೆಗೆ ಹೆಚ್ಚಿನ ಅವಕಾಶ ದೊರೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲಿಷ್‌ಗೆ ಹೆಚ್ಚಿನ ಒತ್ತು ನೀಡುವುದರಿಂದ ಮಕ್ಕಳ ಕಲಿಕೆಯ ಆಸಕ್ತಿ ಕುಂಠಿತವಾಗುವ ಸಾಧ್ಯತೆ ಇದೆ. ಇದರಿಂದ ಪೋಷಕರಲ್ಲಿ ಆತಂಕ ಹಾಗೂ ಕನ್ನಡ ಮಾಧ್ಯಮ ಶಿಕ್ಷಕರಲ್ಲಿ ಗೊಂದಲ ಉಂಟಾಗುತ್ತಿದೆ. ಜೊತೆಗೆ ಕನ್ನಡ ಭಾಷೆಯ ಅಸ್ತಿತ್ವ ಹಾಗೂ ಕರ್ನಾಟಕದ ಸಾಂಸ್ಕೃತಿಕ ಸಂವೇದನೆಗೆ ಧಕ್ಕೆಯಾಗುವ ಅಪಾಯವಿದೆ ಎಂದು ಎಚ್ಚರಿಸಿದರು.
ಈ ಹಿನ್ನೆಲೆಯಲ್ಲಿ ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದ ರಾಜ್ಯ ಸರ್ಕಾರದ ನಿರ್ಧಾರವನ್ನು ತಕ್ಷಣ ಮರುಪರಿಶೀಲಿಸಿ, ಕನ್ನಡ ಭಾಷೆ, ಕರ್ನಾಟಕದ ಅಸ್ಮಿತೆ ಹಾಗೂ ಸಾಂಸ್ಕೃತಿಕ ಘನತೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರಪತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳು, ಸಾಹಿತ್ಯಾಸಕ್ತರು ಹಾಗೂ ಕನ್ನಡಪರ ಚಿಂತಕರು ಉಪಸ್ಥಿತರಿದ್ದರು.



