ರಾಜಕೀಯ

ಹಲ್ದ್ವಾನಿ ವೇದಿಕೆ ಶುದ್ಧೀಕರಣ ಘಟನೆ ಖಂಡನೀಯ: ಪ್ರಧಾನಿ ಮೋದಿ ಕ್ಷಮೆಯಾಚಿಸಲಿ

ದಲಿತ ಸಮುದಾಯದ ಆತ್ಮಗೌರವಕ್ಕೆ ಧಕ್ಕೆ ತಂದ ಘಟನೆ ಕುರಿತು ನಿಷ್ಪಕ್ಷಪಾತ ತನಿಖೆಗೆ ಲಚ್ಚಪ್ಪ ಜಮಾದಾರ್ ಆಗ್ರಹ

ಕಲಬುರಗಿ, ಆ.16: ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದಿರುವುದಾಗಿ ವರದಿಯಾಗಿರುವ ವೇದಿಕೆ ಶುದ್ಧೀಕರಣ ಘಟನೆ ಅತ್ಯಂತ ಅಮಾನವೀಯ, ಅವಮಾನಕಾರಿ ಹಾಗೂ ಸಾಮಾಜಿಕ ನ್ಯಾಯದ ಮೌಲ್ಯಗಳಿಗೆ ವಿರುದ್ಧವಾದದ್ದು ಎಂದು ಕೋಳಿ ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಲಚ್ಚಪ್ಪ ಜಮಾದಾರ್ ಖಂಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ವೇದಿಕೆಯನ್ನು ಶುದ್ಧೀಕರಿಸಲಾಗಿದೆ ಎಂಬ ವರದಿ ಅತ್ಯಂತ ಖಂಡನೀಯವಾಗಿದೆ. ಇದು ಕೇವಲ ಒಬ್ಬ ವ್ಯಕ್ತಿಗೆ ಮಾಡಿದ ಅವಮಾನವಲ್ಲ, ದೇಶದ ದಲಿತ ಹಾಗೂ ಶೋಷಿತ ಸಮುದಾಯಗಳ ಆತ್ಮಗೌರವಕ್ಕೆ ಧಕ್ಕೆ ತರುವಂತಹ ಕೃತ್ಯವಾಗಿದೆ ಎಂದು ಹೇಳಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳಿಗೆ ಇಂತಹ ಘಟನೆಗಳು ವಿರುದ್ಧವಾಗಿವೆ. ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ವ್ಯಕ್ತಿಯ ಸಾಮಾಜಿಕ ಹಿನ್ನೆಲೆಯನ್ನು ಆಧರಿಸಿ ಅವಮಾನಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವುದಿಲ್ಲ ಎಂದು ಲಚ್ಚಪ್ಪ ಜಮಾದಾರ್ ಹೇಳಿದರು.

ಘಟನೆಯ ಸಂಪೂರ್ಣ ಹಿನ್ನೆಲೆಯನ್ನು ಬಹಿರಂಗಪಡಿಸುವಂತೆ ಆಗ್ರಹ

ಘಟನೆ ನಿಜವಾಗಿ ಹೇಗೆ ನಡೆದಿದೆ, ಕಾರ್ಯಕ್ರಮದ ಆಯೋಜಕರು ಯಾರು, ಇದಕ್ಕೆ ಹೊಣೆಗಾರರು ಯಾರು ಹಾಗೂ ಯಾರ ಸೂಚನೆಯ ಮೇರೆಗೆ ಈ ಕೃತ್ಯ ನಡೆದಿದೆ ಎಂಬುದನ್ನು ಪತ್ತೆಹಚ್ಚಲು ನಿಷ್ಪಕ್ಷಪಾತ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಕ್ಷಮೆಯಾಚಿಸಬೇಕು. ಇದರ ಹಿಂದೆ ಯಾರಾದರೂ ಸಂಘಟಿತವಾಗಿ ಕಾರ್ಯನಿರ್ವಹಿಸಿದ್ದರೆ, ಅವರ ಪಾತ್ರದ ಕುರಿತು ತನಿಖೆ ನಡೆಸಿ ಸತ್ಯವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಜಾತಿ ಆಧಾರಿತ ಅವಮಾನ ಹಾಗೂ ಅಸ್ಪೃಶ್ಯತೆಯ ಮನೋಭಾವವನ್ನು ಉತ್ತೇಜಿಸುವ ಯಾವುದೇ ಕೃತ್ಯದ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಡಾ. ಅಂಬೇಡ್ಕರ್ ಅವರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಬಣ) ಜಿಲ್ಲಾ ಸಂಚಾಲಕ ಭೀಮಶಾ ಖನ್ನಾ, ಅಂಬಾರಾಯ ಜವಳಗಾ, ರಾಮಲಿಂಗ ನಾಟೀಕಾರ್, ರಾಣು ಮುದ್ದನಕರ್, ದೇವೇಂದ್ರ ಜಮಾದಾರ್, ಯಲ್ಲಪ್ಪ ದೊಡ್ಡಮನಿ, ಅಭಿಷೇಕ ಉಪಾಧ್ಯಾಯ, ಅರುಣಕುಮಾರ್ ಇನಾಂದಾರ್, ಗೌತಮ್ ಉಪಾಧ್ಯಾಯ, ಮಲ್ಲಿಕಾರ್ಜುನ ಹೊಸಮನಿ, ದಯಾನಂದ ಕೋಹಿನೂರ್, ಮಹೇಶ್ ರಾಮಪೂರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button