ಜಿಲ್ಲಾಸುದ್ದಿಶಿಕ್ಷಣ

ಶಾಲಾ-ಕಾಲೇಜುಗಳಲ್ಲೇ ದೇಶದ ಭವಿಷ್ಯ ನಿರ್ಮಾಣ: ಸತ್ಯಂಪೇಟೆ

ಮೆರವಣಿಗೆ, ಘೋಷಣೆಗಳಿಗಿಂತ ಶಿಕ್ಷಣ ಮತ್ತು ಮೌಲ್ಯಾಧಾರಿತ ತರಬೇತಿಗೆ ಆದ್ಯತೆ ಅಗತ್ಯ

ಕಲಬುರಗಿ: ದೇಶದ ಭವಿಷ್ಯ ನಿರ್ಮಾಣವಾಗುವುದು ಶಾಲಾ-ಕಾಲೇಜುಗಳ ತರಗತಿ ಕೊಠಡಿಗಳು ಹಾಗೂ ತರಬೇತಿ ಕಾರ್ಯಕ್ರಮಗಳಲ್ಲಿ ಹೊರತು ಕೇವಲ ಅಬ್ಬರದ ಮೆರವಣಿಗೆ ಮತ್ತು ಘೋಷಣೆಗಳಿಂದಲ್ಲ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ನಗರದ ಎಸ್.ಎಸ್. ತೆಗನೂರ ಪದವಿಪೂರ್ವ ಹಾಗೂ ಪದವಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಜಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಲಾಲ್, ಬಾಲ್, ಪಾಲ್ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನದಿಂದ ಭಾರತ ಸ್ವತಂತ್ರ ದೇಶವಾಗಿದೆ. ಆದರೆ ಸ್ವಾತಂತ್ರ್ಯ ಹೋರಾಟಗಾರರು ಕಂಡಿದ್ದ ಕನಸುಗಳು ಸಂಪೂರ್ಣವಾಗಿ ಈಡೇರಿವೆಯೇ ಎಂಬುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಇಂದಿಗೂ ಸಮಾಜದ ಹಲವು ಕಡೆಗಳಲ್ಲಿ ಅಸಮಾನತೆ, ಅಂಧಕಾರ, ಭ್ರಷ್ಟಾಚಾರ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಕಂಡುಬರುತ್ತಿವೆ. ನಿರುದ್ಯೋಗ ಮತ್ತು ಭ್ರಷ್ಟಾಚಾರ ಸೇರಿದಂತೆ ದೇಶದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಇಂದಿನ ಯುವಜನರ ಪ್ರಮುಖ ಜವಾಬ್ದಾರಿಯಾಗಿದೆ. ಸ್ವಾವಲಂಬಿ ಜೀವನ ನಡೆಸುವ ಮೂಲಕ ದೇಶ ಸೇವೆಗೆ ಮುಂದಾಗಬೇಕು ಎಂದು ಸತ್ಯಂಪೇಟೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಜ್ಯೋತಿ ಆರ್. ತೆಗನೂರು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳಬೇಕು. ಅನ್ಯಾಯವನ್ನು ಖಂಡಿಸುವ ಹಾಗೂ ಸತ್ಯವನ್ನು ಪ್ರತಿಪಾದಿಸುವ ಆದರ್ಶ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಜವಾಬ್ದಾರಿಯುತ ನಾಗರಿಕರಾಗಬೇಕು ಎಂದು ಕರೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ರವೀಂದ್ರ ತೆಗನೂರ ವೇದಿಕೆಯಲ್ಲಿದ್ದರು. ಶ್ವೇತಾ ಮತ್ತು ಫಿಲೋಮಿನಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಶಿಕ್ಷಣ ವ್ಯವಸ್ಥೆಗೆ ಕನ್ನಡಿ ಹಿಡಿದ ವಿದ್ಯಾರ್ಥಿಗಳ ನಾಟಕ

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಹಾಗೂ ಸಮಾಜದಲ್ಲಿನ ಹಲವು ಸಮಸ್ಯೆಗಳನ್ನು ಪ್ರತಿಬಿಂಬಿಸುವ ನಾಟಕ ಪ್ರದರ್ಶಿಸಿದರು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಡಿಜಿಟಲ್ ಅಪರಾಧ, ಮೋಸ ಮತ್ತು ವಂಚನೆ ಸೇರಿದಂತೆ ಇಂದಿನ ಯುವಜನರು ಎದುರಿಸುತ್ತಿರುವ ಹಲವು ಸವಾಲುಗಳನ್ನು ನಾಟಕದ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸಲಾಯಿತು.

ನಾಟಕದಲ್ಲಿ ಆದಿತ್ಯಾ, ಸ್ನೇಹಾ, ಸಹರಾ, ಅಂಜಲಿ, ವೀರನಗೌಡ, ಲಕ್ಷ್ಮೀಪುತ್ರ, ಶಿವಪುತ್ರ ಹಾಗೂ ಶ್ರೀಶೈಲ ಅಭಿನಯಿಸಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಇಂದಿನ ಶಿಕ್ಷಣ ವ್ಯವಸ್ಥೆಯ ಹಲವು ಆಯಾಮಗಳಿಗೆ ಕನ್ನಡಿ ಹಿಡಿಯುವಂತಿದ್ದ ನಾಟಕವು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಸಂದೇಶ ನೀಡಿತು.

ಇದೇ ಸಂದರ್ಭದಲ್ಲಿ ಭವಿಷ್ಯದ ಪತ್ರಿಕೆಗಳಲ್ಲಿ ಸುದ್ದಿಗಳಿಗೆ ನೀಡಬೇಕಾದ ಆದ್ಯತೆ, ಕೃತಕ ಬುದ್ಧಿಮತ್ತೆಯ (ಎಐ) ಪ್ರಭಾವ, ಬದಲಾಗುತ್ತಿರುವ ಪತ್ರಿಕೆಗಳ ಗಾತ್ರ ಮತ್ತು ಸ್ವರೂಪ ಹಾಗೂ ಡಿಜಿಟಲೀಕರಣ ಸೇರಿದಂತೆ ವಿವಿಧ ವಿಷಯಗಳನ್ನು ಆಧರಿಸಿ ಪತ್ರಿಕಾ ರಚನಾ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ರೋಹಿಣಿ ಮತ್ತು ಕೀರ್ತನಾ ಪ್ರಥಮ ಸ್ಥಾನ ಪಡೆದುಕೊಂಡರು.

Related Articles

Leave a Reply

Your email address will not be published. Required fields are marked *

Back to top button