ಸೆ.27ರಂದು ಕಲಬುರಗಿಯಲ್ಲಿ ಬಸವಾದಿ ಶಿವಶರಣರ ಹಿಂದೂ ಸಮಾವೇಶ

ಕಲಬುರಗಿ, ಸೆ.19: ಎಲ್ಲ ಪ್ರಪಂಚಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 27ರಂದು ಸಂಜೆ 4 ಗಂಟೆಗೆ ನಗರದಲ್ಲಿ ಬಸವಾದಿ ಶಿವಶರಣರ ಹಿಂದೂ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶವನ್ನು ವಿರೋಧಿಸುವುದು ಸರಿಯಲ್ಲ ಎಂದು ಶ್ರೀ ಬಸವೇಶ್ವರ ಸೇವಾ ಸಮಾಜದ ಅಧ್ಯಕ್ಷ ಸಿದ್ದಣ್ಣ ಅ. ಗುಡ್ಡಾ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನೇರಿ ಮಠದ ಅಧ್ಯಕ್ಷ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ನಾಡಿನ ಹರಗುರು, ಚರಮೂರ್ತಿಗಳ ನೇತೃತ್ವದಲ್ಲಿ, ಬಿಜೆಪಿ ನಗರ ಜಿಲ್ಲಾ ಅಧ್ಯಕ್ಷ ಚಂದು ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಸಮಾವೇಶ ನಡೆಯಲಿದೆ. ಹಿಂದೂ ಸಮಾಜ ಹಾಗೂ ಬಸವಾದಿ ಶಿವಶರಣರ ತತ್ವಗಳನ್ನು ಸಾರುವುದು ಸಮಾವೇಶದ ಉದ್ದೇಶವಾಗಿದೆ ಎಂದರು.
ಸಮಾನತೆ, ಕಾಯಕ ಮತ್ತು ದಾಸೋಹದಂತಹ ಬಸವಾದಿ ಶರಣರ ತತ್ವಗಳ ಜೊತೆಗೆ ದೇಶದ ಭವ್ಯ ಸಂಸ್ಕೃತಿ, ಸಾವಯವ ಕೃಷಿ, ಗೋಸಂರಕ್ಷಣೆ, ಹೈನುಗಾರಿಕೆ ಸೇರಿದಂತೆ ಕೃಷಿ ಸಂಬಂಧಿತ ವಿವಿಧ ಸಾವಯವ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಸಂದೇಶವನ್ನು ಸಮಾವೇಶದ ಮೂಲಕ ನೀಡಲಾಗುವುದು ಎಂದು ತಿಳಿಸಿದರು.
ಸಮಾವೇಶದ ಅಂಗವಾಗಿ ಸುಮಾರು 2,000 ಮಹಿಳೆಯರಿಂದ ಕುಂಭ ಮೆರವಣಿಗೆ ಹಾಗೂ ಡೋಲು, ನಗಾರಿ ಮತ್ತು ಶಿವಶರಣರ ಭಾವಚಿತ್ರಗಳೊಂದಿಗೆ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ. ಈ ಮೆರವಣಿಗೆಯು ಖಾದಿರ್ ಕನಸು ಮಹಾಜಗತ್ ವೃತ್ತದಿಂದ ನೂತನ ವಿದ್ಯಾಲಯ ಮೈದಾನದವರೆಗೆ ನಡೆಯಲಿದೆ ಎಂದು ಹೇಳಿದರು.
ನೂತನ ವಿದ್ಯಾಲಯದ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಜಿಲ್ಲೆಯಾದ್ಯಂತ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದು ಸಿದ್ದಣ್ಣ ಗುಡ್ಡಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶರಣಪ್ಪ ಬ. ಅವಂಟಗಿ, ಮಹಾದೇವ ಅ. ಗೋಡಿ, ಶಿವಶರಣಪ್ಪ ಮ. ಬ್ಯಾಮಾ, ಗುರಲಿಂಗಪ್ಪ ಪಾಟೀಲ, ಚನ್ನಬಸಪ್ಪ ಎಸ್. ಕಾಳಗಿ, ಮಲ್ಲೇಶಪ್ಪ ಸೈಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.



