ಕಲೆಸಾಂಸ್ಕೃತಿಕ

ಆ. 10 ಮತ್ತು 11ರಂದು ಕಲಬುರಗಿಯಲ್ಲಿ ‘ಸಣ್ಣಗೌಡಸಾನಿ’ ನಾಟಕ ಪ್ರದರ್ಶನ

ನಾಡೋಜ ಡಾ. ಶಾಂತರಸ ಅವರ ಪ್ರಸಿದ್ಧ ಕಾದಂಬರಿ ಆಧಾರಿತ ನಾಟಕ; ರಂಗಾಯಣದ ರೆಪರ್ಟರಿ ಕಲಾವಿದರಿಂದ ರಂಗಪ್ರದರ್ಶನ

ಕಲಬುರಗಿ, ಆ. 8: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಂಗಾಯಣ ಕಲಬುರಗಿ ಸಹಯೋಗದಲ್ಲಿ ನಾಡೋಜ ಡಾ. ಶಾಂತರಸ ಅವರ ಪ್ರಸಿದ್ಧ ಕಾದಂಬರಿ ಆಧಾರಿತ ‘ಸಣ್ಣಗೌಡಸಾನಿ’ ನಾಟಕವನ್ನು ಆಗಸ್ಟ್ 10 ಮತ್ತು 11ರಂದು ಸಂಜೆ 6 ಗಂಟೆಗೆ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಪ್ರದರ್ಶಿಸಲಾಗುವುದು ಎಂದು ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ. ಸುಜಾತ ಜಂಗಮಶೆಟ್ಟಿ ತಿಳಿಸಿದ್ದಾರೆ.

ನಗರದ ಕಲಬುರಗಿ ರಂಗಾಯಣದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗಾಯಣದ ರೆಪರ್ಟರಿ ಕಲಾವಿದರು ನಾಟಕವನ್ನು ಪ್ರದರ್ಶಿಸಲಿದ್ದು, ಮಾಹಿತಿ ಆಯೋಗದ ಅಧ್ಯಕ್ಷ ಬಿ. ವೆಂಕಟ ಸಿಂಗ್ ಅವರು ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಡಾ. ಸುಜಾತ ಜಂಗಮಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಬಾಗಲಕೋಟೆ ರಂಗಸಮಾಜದ ಸದಸ್ಯ ಮಹಾಂತೇಶ ಎಂ. ಗಜೇಂದ್ರಗಡ ಹಾಗೂ ಕಲಬುರಗಿಯ ಕನ್ನಡ ಪ್ರಭ ವರದಿಗಾರ ಶೇಷಮೂರ್ತಿ ಅವಧಾನಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

‘ಸಣ್ಣಗೌಡಸಾನಿ’ ನಾಟಕದ ರಂಗಗೀತೆಗಳು ಹಾಗೂ ಶಾಂತರಸರ ಗಜಲ್‌ಗಳ ಗಾಯನವನ್ನು ಧಾರವಾಡದ ರಾಘವ ಕಮ್ಮಾರ ಮತ್ತು ತಂಡ ಪ್ರಸ್ತುತಪಡಿಸಲಿದೆ. ರಂಗಸಜ್ಜಿಕೆ ಹಾಗೂ ರಂಗಪರಿಕರಗಳ ನಿರ್ವಹಣೆಯನ್ನು ರಾಜಕುಮಾರ್ ಎಸ್.ಕೆ. ವಹಿಸಲಿದ್ದು, ಬೆಳಕು ಮತ್ತು ಸಹ ನಿರ್ದೇಶನದ ಜವಾಬ್ದಾರಿಯನ್ನು ಶ್ರೀನಿವಾಸ ದೋರನಹಳ್ಳಿ ನಿರ್ವಹಿಸಲಿದ್ದಾರೆ.

ನಾಟಕದ ರಂಗಪಠ್ಯ, ವಸ್ತು ವಿನ್ಯಾಸ ಹಾಗೂ ನಿರ್ದೇಶನವನ್ನು ಪ್ರವೀಣ ರೆಡ್ಡಿ ಗುಂಜನಹಳ್ಳಿ ವಹಿಸಿಕೊಂಡಿದ್ದಾರೆ. ನಾಟಕದ ಕಲಾತ್ಮಕ ಹಾಗೂ ತಾಂತ್ರಿಕ ತಂಡದ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸುದ್ದಿಗೋಷ್ಠಿಯಲ್ಲಿ ‘ಸಣ್ಣಗೌಡಸಾನಿ’ ನಾಟಕದ ಭಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ರಂಗಾಯಣದ ಆಡಳಿತಾಧಿಕಾರಿ ಸಿದ್ಧರಾಮ ಶಿಂಧೆ, ಮಹಾಂತೇಶ ನವಲಕಲ್, ಪ್ರವೀಣ ರೆಡ್ಡಿ ಗುಂಜನಹಳ್ಳಿ, ರಾಘವ ಕಮ್ಮಾರ, ಅಮರನಾಥ ಇರ್ಕಲ್ ಸೇರಿದಂತೆ ರಂಗಾಯಣದ ಸಿಬ್ಬಂದಿ ಹಾಗೂ ಕಲಾವಿದರು ಉಪಸ್ಥಿತರಿದ್ದರು.

ಕಲಬುರಗಿಯ ರಂಗಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕ ಪ್ರದರ್ಶನದಲ್ಲಿ ಪಾಲ್ಗೊಂಡು ಕಲಾವಿದರನ್ನು ಪ್ರೋತ್ಸಾಹಿಸುವಂತೆ ರಂಗಾಯಣದ ವತಿಯಿಂದ ಮನವಿ ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button