
ಗುವಾಹಟಿ, ಜು. 26: ಅಸ್ಸಾಂನಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಸಾರ್ವಜನಿಕರು ಪರಿಹಾರ ಕಾರ್ಯಗಳಿಗೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಮೂಲಕ ಅವರು ಅಸ್ಸಾಂನ ಪ್ರವಾಹ ಪರಿಸ್ಥಿತಿಯ ವಿಡಿಯೊಗಳನ್ನು ಹಂಚಿಕೊಂಡು ನೆರವಿನ ಅಗತ್ಯವನ್ನು ಒತ್ತಿಹೇಳಿದ್ದಾರೆ.
ತಮ್ಮ ವಿಡಿಯೊದಲ್ಲಿ ಮಾತನಾಡಿರುವ ಭೂಮಿ, ಅಸ್ಸಾಂನಲ್ಲಿ ಪ್ರವಾಹದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಸುಮಾರು 7.5 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಅನೇಕ ಗ್ರಾಮಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿಹೋಗಿದ್ದು, ಸಾಕುಪ್ರಾಣಿಗಳೂ ಸಹ ಪ್ರವಾಹಕ್ಕೆ ಬಲಿಯಾಗಿವೆ. ಜನರು ತಮ್ಮ ಸರ್ವಸ್ವವನ್ನೇ ಕಳೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ದೇಶದ ಜನತೆ ಒಂದಾಗಿ ನೆರವು ನೀಡಿದ ಉದಾಹರಣೆಯನ್ನು ನೆನಪಿಸಿದ ಅವರು, ಈ ಬಾರಿ ಅಸ್ಸಾಂಗೆ ದೇಶದ ಬೆಂಬಲ ಅಗತ್ಯವಾಗಿದೆ ಎಂದರು. ಆಹಾರ ಸಾಮಗ್ರಿ, ಹಾಸಿಗೆಗಳು, ನೈರ್ಮಲ್ಯ ವಸ್ತುಗಳು ಹಾಗೂ ಸ್ಥಳಾಂತರ ಕಾರ್ಯಗಳಿಗೆ ಅಗತ್ಯವಾದ ನೆರವು ತುರ್ತಾಗಿ ಬೇಕಿದೆ. ಅಸ್ಸಾಂನ ದೃಶ್ಯಗಳು ಮನಕಲಕುವಂತಿವೆ. ಸಾಧ್ಯವಾದಷ್ಟು ದೇಣಿಗೆ ನೀಡಿ, ಈ ಸಂದೇಶವನ್ನು ಎಲ್ಲರಿಗೂ ತಲುಪಿಸುವಂತೆ ಅವರು ಮನವಿ ಮಾಡಿದರು.
ಇನ್ನೊಂದು ವಿಡಿಯೊ ಹಂಚಿಕೊಂಡಿರುವ ಭೂಮಿ, ಅಸ್ಸಾಂ ಮಾತ್ರವಲ್ಲದೆ ಗುಜರಾತಿನ ಕೆಲವು ಭಾಗಗಳೂ ಪ್ರವಾಹದಿಂದ ತತ್ತರಿಸಿವೆ ಎಂದು ಉಲ್ಲೇಖಿಸಿ, ಸಾಮಾಜಿಕ ಜಾಲತಾಣಗಳ ಮೂಲಕ ಈ ವಿಷಯವನ್ನು ಹೆಚ್ಚಿನ ಜನರಿಗೆ ತಲುಪಿಸಬೇಕೆಂದು ಕರೆ ನೀಡಿದರು. “ಅಲ್ಗಾರಿದಮ್‌ನ ಶಕ್ತಿಯನ್ನು ನಾವು ಈಗಾಗಲೇ ನೋಡಿದ್ದೇವೆ. ಈಗ ಅದನ್ನೇ ಜನರ ನೆರವಿಗಾಗಿ ಬಳಸುವ ಸಮಯ ಬಂದಿದೆ” ಎಂದು ಅವರು ಬರೆದುಕೊಂಡಿದ್ದಾರೆ.
ಭೂಮಿ ಪೆಡ್ನೇಕರ್ ಅವರ ಈ ಮಾನವೀಯ ಮನವಿಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಾಗೂ ಖ್ಯಾತ ಗಾಯಕ ನಿಲೋತ್ಪಲ್ ಬೋರಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರವಾಹ ಸಂತ್ರಸ್ತರ ನೆರವಿಗೆ ಧ್ವನಿಯಾಗಿದ್ದಕ್ಕಾಗಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.



