ಅಪರಾಧ

ಪತ್ನಿಯ ಮೇಲೆ ಸಂಶಯ: ಜಿಲೆಟಿನ್ ಕಡ್ಡಿ ಬಳಸಿ ಮನೆ ಸ್ಫೋಟಿಸಿದ ವ್ಯಕ್ತಿ; ಪುತ್ರಿ ಸಾವು

ಆಳಂದ್ ತಾಲೂಕಿನ ಮಟಕಿ ತಾಂಡಾದಲ್ಲಿ ಭೀಕರ ಘಟನೆ; ನಾಲ್ವರಿಗೆ ಗಂಭೀರ ಗಾಯ

ಆಳಂದ್, ಆ.11: ಪತ್ನಿಯ ಮೇಲೆ ಸಂಶಯ ವ್ಯಕ್ತಪಡಿಸಿ ವ್ಯಕ್ತಿಯೊಬ್ಬ ಜಿಲೆಟಿನ್ ಕಡ್ಡಿ ಬಳಸಿ ಮನೆಗೆ ಸ್ಫೋಟಕ ಇಟ್ಟು ಸ್ಫೋಟಿಸಿದ ಪರಿಣಾಮ ಆತ ಸೇರಿದಂತೆ ಪುತ್ರಿ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಮಂಗಳವಾರ ಬೆಳಗ್ಗೆ ಆಳಂದ್ ತಾಲೂಕಿನ ಮಟಕಿ ತಾಂಡಾದಲ್ಲಿ ನಡೆದಿದೆ.

ಮೃತರನ್ನು ಸೇವಾಲಾಲ್ ಬಲಿರಾಮ್ ರಾಠೋಡ್ (50) ಹಾಗೂ ಅವರ ಪುತ್ರಿ ಮೀರಾ ಸೇವಾಲಾಲ್ ರಾಠೋಡ್ (15) ಎಂದು ಗುರುತಿಸಲಾಗಿದೆ. ಸ್ಫೋಟದಲ್ಲಿ ಸೇವಾಲಾಲ್ ಅವರ ಪತ್ನಿ ಶ್ರೀಮತಿ ಸವಿತಾ ಸೇವಾಲಾಲ್ ರಾಠೋಡ್ (40), ಪುತ್ರ ಪ್ರಕಾಶ್ ಸೇವಾಲಾಲ್ ರಾಠೋಡ್ (19), ನಾದಿನಿ ಸುರೇಖಾ ಕೃಷ್ಣ ಚವಾಣ್ (30) ಹಾಗೂ ಆಕೆಯ ಪುತ್ರ ವಿವೇಕ್ ಕೃಷ್ಣ ಚವಾಣ್ ಗಾಯಗೊಂಡಿದ್ದಾರೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಆರಂಭದಲ್ಲಿ ಮನೆಯಲ್ಲಿ ಬಾಂಬ್ ಸ್ಫೋಟವಾಗಿದೆ ಎಂಬ ವದಂತಿ ತಾಲೂಕಿನಾದ್ಯಂತ ಹರಡಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಜಿಲೆಟಿನ್ ಕಡ್ಡಿಯಿಂದ ಸ್ಫೋಟ ಸಂಭವಿಸಿರುವುದು ಬೆಳಕಿಗೆ ಬಂದಿದೆ.

ಪತ್ನಿಯ ಮೇಲೆ ಸಂಶಯ ಹೊಂದಿದ್ದ ಸೇವಾಲಾಲ್ ಬಲಿರಾಮ್ ರಾಠೋಡ್, ತಾನು ಕೆಲಸ ಮಾಡುತ್ತಿದ್ದ ಕಲ್ಲು ಕ್ವಾರಿಯಿಂದ ಜಿಲೆಟಿನ್ ಕಡ್ಡಿಯನ್ನು ಮನೆಗೆ ತಂದಿದ್ದ ಎನ್ನಲಾಗಿದೆ. ಬೆಳಗ್ಗೆ ಮನೆಯಲ್ಲಿದ್ದ ಕುಟುಂಬಸ್ಥರ ಎದುರೇ ಜಿಲೆಟಿನ್ ಕಡ್ಡಿಯನ್ನು ಬಳಸಿ ಸ್ಫೋಟ ನಡೆಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಸ್ಫೋಟದ ತೀವ್ರತೆಗೆ ಮನೆಗೆ ಹಾನಿಯಾಗಿದ್ದು, ಸೇವಾಲಾಲ್ ಹಾಗೂ ಪುತ್ರಿ ಮೀರಾ ಮೃತಪಟ್ಟಿದ್ದಾರೆ. ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button