ಗುರು ಪೂರ್ಣಿಮೆ ಅಂಗವಾಗಿ ಡಾ. ಶಿವಕುಮಾರ ಸ್ವಾಮೀಜಿಗೆ ತುಲಾಭಾರ, ಕನಕ ಪುಷ್ಪವೃಷ್ಟಿ
ಬೀದರ್ ಸಿದ್ಧಾರೂಢ ಮಠದಲ್ಲಿ ಭಕ್ತಿಭಾವದ ಆಚರಣೆ; ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರ ಆಗಮನ

ನಗರದ ಸಿದ್ಧಾರೂಢ ಮಠದಲ್ಲಿ ಗುರು ಪೂರ್ಣಿಮೆಯನ್ನು ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಡಾ. ಶಿವಕುಮಾರ ಸ್ವಾಮೀಜಿಗೆ ತುಲಾಭಾರ ನೆರವೇರಿಸಿ, ಕನಕ ಪುಷ್ಪವೃಷ್ಟಿ ಮಾಡುವ ಮೂಲಕ ಭಕ್ತರು ವಿಶೇಷ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಂಕರಾನಂದ ಸ್ವಾಮೀಜಿ, ಮಾತೆ ಆನಂದಮಯಿ, ಸಂಗೀತಾದೇವಿ ಹಾಗೂ ಬಸವಂತರಾಯ ಬಿರಾದಾರ ಸೇರಿದಂತೆ ಅನೇಕ ಭಕ್ತರು ತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುವಿಗೆ ಭಕ್ತಿಭಾವದಿಂದ ವಂದನೆ ಸಲ್ಲಿಸಿದರು.
ಬಳಿಕ ಮಠದ ಸಾಧಕ-ಸಾಧಕಿಯರು ಷೋಡಶೋಪಚಾರ ಪೂಜೆ ನೆರವೇರಿಸಿ, ಶ್ರೀಗಳ ಪಾದಪೂಜೆ ಮಾಡಿದರು. ಸುವರ್ಣ ಕಿರೀಟ ಧಾರಣೆ ಹಾಗೂ ಕನಕ ಪುಷ್ಪವೃಷ್ಟಿಯ ಮೂಲಕ ಗುರುಗಳಿಗೆ ಗೌರವ ಸಲ್ಲಿಸಲಾಯಿತು. ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸದ್ಗುರುಗಳ ದರ್ಶನ ಪಡೆದು ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಡಾ. ಶಿವಕುಮಾರ ಸ್ವಾಮೀಜಿ, ಪ್ರಾಪಂಚಿಕ ಜೀವನದಲ್ಲಿ ಅನೇಕ ಹಬ್ಬಗಳಿದ್ದರೂ ಆತ್ಮೋನ್ನತಿ ಮತ್ತು ಪರಮಾರ್ಥದ ಮಾರ್ಗದಲ್ಲಿ ಸಾಗುವವರಿಗೆ ಗುರು ಪೂರ್ಣಿಮೆಯೇ ಶ್ರೇಷ್ಠ ಹಬ್ಬವಾಗಿದೆ ಎಂದು ಹೇಳಿದರು.
ದುಃಖದಿಂದ ಮುಕ್ತಿ ಮತ್ತು ಬದುಕಿಗೆ ದಾರಿದೀಪವಾಗುವ ಸದ್ಗುರುವಿನ ಪಾದಕ್ಕೆ ಶರಣಾಗುವವರ ಜೀವನ ಸಾರ್ಥಕವಾಗುತ್ತದೆ. ಸದ್ಗುರು ಪಾಪಿಗಳನ್ನೂ ಉದ್ಧಾರ ಮಾಡುವ ಕರುಣಾಮಯ ಹಾಗೂ ಕೃಪಾಮಯ ಸ್ವರೂಪ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲಬುರಗಿಯ ಮಾತೆ ಲಕ್ಷ್ಮೀದೇವಿ, ಸೋಲಾಪುರದ ಜಡಿಸಿದ್ಧೇಶ್ವರ ಸ್ವಾಮೀಜಿ, ನಾಸಿಕ್ನ ಮಾತೆ ಮನೀಷಾ, ಗುರುದೇವಾಶ್ರಮದ ಮಾತೆ ಸಿದ್ಧೇಶ್ವರಿ ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಗುರು ಪೂರ್ಣಿಮೆ ಹಾಗೂ ಗುರುವಿನ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ಶಂಕರಾನಂದ ಸ್ವಾಮೀಜಿ, ಅದ್ವೈತಾನಂದ ಸ್ವಾಮೀಜಿ, ಶಿವಪ್ರಕಾಶಾನಂದ ಗಿರಿ ಸ್ವಾಮೀಜಿ, ಸ್ವಾತ್ಮಾನಂದಗಿರಿ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಗಣಪತಿ ಮಹಾರಾಜ್, ಮಾತೆ ಸುಶಾಂತಾತಾಯಿ, ಮಾತೆ ಸಂಗೀತಾ, ಮಾತೆ ಅಮೃತಾನಂದಮಯಿ, ಮಾತೆ ಜ್ಞಾನೇಶ್ವರಿ, ಪರಮಾನಂದ ಸ್ವಾಮೀಜಿ, ವಿನಾಯಕ ದೇವರು ಸೇರಿದಂತೆ ಅನೇಕ ಗಣ್ಯರು, ವಿವಿಧ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



