ಜಿಲ್ಲಾಸುದ್ದಿ

ಹೋಟೆಲ್‌ಗಳಲ್ಲಿ ಮೂಲಸೌಕರ್ಯ ಕೊರತೆ: ಪರವಾನಗಿ ರದ್ದುಪಡಿಸಲು ಬಡದಾಳ್ ಆಗ್ರಹ

ಕಲಬುರಗಿ, ಸೆ.12- ನಗರದ ಹಲವು ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳಲ್ಲಿ ಶೌಚಾಲಯ, ಶುದ್ಧ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಲಭ್ಯಗಳ ಕೊರತೆಯಿದ್ದು, ಗ್ರಾಹಕರಿಗೆ ತೊಂದರೆಯಾಗುತ್ತಿದೆ. ನಿಯಮ ಪಾಲಿಸದ ಹೋಟೆಲ್‌ಗಳ ಪರವಾನಗಿಯನ್ನು ರದ್ದುಪಡಿಸಿ ಕ್ರಮ ಕೈಗೊಳ್ಳಬೇಕು ಎಂದು ಜಾತ್ಯತೀತ ಜನತಾದಳದ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಜಕುಮಾರ್ ಬಡದಾಳ್ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಮಾಲೀಕರು ಗ್ರಾಹಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಹೋಟೆಲ್‌ಗಳಲ್ಲಿ ಸ್ವಚ್ಛತೆ, ಶೌಚಾಲಯ, ಶುದ್ಧ ಕುಡಿಯುವ ನೀರು ಹಾಗೂ ಗುಣಮಟ್ಟದ ಆಹಾರಕ್ಕೆ ಆದ್ಯತೆ ನೀಡಬೇಕು. ಮಹಾನಗರ ಪಾಲಿಕೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಪರವಾನಗಿ ನೀಡುವ ಬದಲು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

ನಿಯಮ ಉಲ್ಲಂಘಿಸುವ ಹೋಟೆಲ್‌ಗಳ ಪರವಾನಗಿ ರದ್ದುಪಡಿಸಿ, ಅಗತ್ಯ ಸೌಲಭ್ಯ ಕಲ್ಪಿಸಿದ ಬಳಿಕವೇ ಮರುಪರವಾನಗಿ ನೀಡಬೇಕು. ಇಲ್ಲವಾದರೆ ಮಹಾನಗರ ಪಾಲಿಕೆ ವಿರುದ್ಧ ಪಕ್ಷದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಬಸವರಾಜ್ ಬಿರಬಟ್ಟಿ, ಬಾಬರ್ ಮುಸ್ತಫಾ, ದೇವೇಂದ್ರ ಹಸನಾಪುರ, ಪ್ರವೀಣ್ ಜಾಧವ್, ನಾಗಣ್ಣ ವಾರದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button