ಅಪರಾಧಸಮಾಜ

ಶಹಾಪುರದಲ್ಲಿ ದಲಿತರ ಮೇಲೆ ಹಲ್ಲೆ ಆರೋಪ: ಆರೋಪಿಗಳ ಬಂಧನಕ್ಕೆ ಕೇರೂರ್ ಆಗ್ರಹ

ಜಾತಿ ನಿಂದನೆ, ಹಲ್ಲೆ ಹಾಗೂ ಬಹಿಷ್ಕಾರದ ಆರೋಪ – 17 ಮಂದಿಯ ವಿರುದ್ಧ ಪ್ರಕರಣ ದಾಖಲು, ಸಂತ್ರಸ್ತ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಒತ್ತಾಯ

ಜೇವರ್ಗಿ, ಆ.6: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಹಾಪುರ ಎಸ್.ಎಚ್. ಗ್ರಾಮದಲ್ಲಿ ದಲಿತ ಸಮುದಾಯದವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ಸಿದ್ದು ಕೇರೂರ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಹಾಪುರ ಗ್ರಾಮದ ದಲಿತ ತಳವಾರ ಕುಟುಂಬದವರು ಎಸ್‌ಟಿ ಸಮುದಾಯದ ಶವದ ಕುಣಿಯನ್ನು ತೋಡುವುದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ದ್ವೇಷ ಸಾಧಿಸಲಾಗಿದೆ ಎಂದು ಆರೋಪಿಸಿದರು.

ಇದೇ ದ್ವೇಷದ ಹಿನ್ನೆಲೆಯಲ್ಲಿ ಗ್ರಾಮದ ದಲಿತ ಸಮುದಾಯದ ದೇವಪ್ಪ ಶಿವಪ್ಪ ತಳವಾರ ಹಾಗೂ ಸಿದ್ದಮ್ಮ ಮಲ್ಲಪ್ಪ ತಳವಾರ ಅವರನ್ನು ಹನುಮಾನ್ ದೇವಸ್ಥಾನದ ಕಟ್ಟೆಗೆ ಕರೆಸಿ, ಸಾರ್ವಜನಿಕವಾಗಿ ಅವಮಾನಿಸಿ, ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಲಾಗಿದೆ ಎಂದು ದೂರಿದರು.

ಅಲ್ಲದೆ, ತಮ್ಮ ಮಾತು ಕೇಳದಿದ್ದರೆ ಗ್ರಾಮದಲ್ಲಿ ಬದುಕಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ, ಕುಟುಂಬವನ್ನು ಗ್ರಾಮದಿಂದ ಬಹಿಷ್ಕರಿಸಲು ಯತ್ನಿಸಲಾಗಿದೆ ಎಂದು ಆರೋಪಿಸಿದರು.

ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಸುಮಾರು 17 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಹಲ್ಲೆಗೊಳಗಾದ ಕುಟುಂಬಕ್ಕೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು ಹಾಗೂ ನ್ಯಾಯ ದೊರಕುವಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸಿದ್ದು ಕೇರೂರ್ ಒತ್ತಾಯಿಸಿದರು.

Related Articles

Leave a Reply

Your email address will not be published. Required fields are marked *

Back to top button