ಶಿಕ್ಷಣ

ಮಂಥನ್ ಸ್ಟಾರ್ಟ್‌ಅಪ್ ನಿಧಿ: ಕೇಂದ್ರೀಯ ವಿಶ್ವವಿದ್ಯಾಲಯದ ಎರಡು ಸ್ಟಾರ್ಟ್‌ಅಪ್ ತಂಡಗಳು ಅಂತಿಮ ಸುತ್ತಿಗೆ ಆಯ್ಕೆ

ಸಾರ್ವಜನಿಕ ಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ನವೀನ ಯೋಜನೆಗಳೊಂದಿಗೆ ವಿದ್ಯಾರ್ಥಿಗಳ ಸಾಧನೆ

ಕಲಬುರಗಿ, ಆ.29: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವ್ಯವಹಾರ ನಿರ್ವಹಣಾ ವಿಭಾಗ ಹಾಗೂ ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾ ವಿಭಾಗದ ವಿದ್ಯಾರ್ಥಿಗಳ ನೇತೃತ್ವದ ಎರಡು ಸ್ಟಾರ್ಟ್‌ಅಪ್ ತಂಡಗಳು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಆಯೋಜಿಸಿರುವ ‘ಮಂಥನ್ ಸ್ಟಾರ್ಟ್‌ಅಪ್ ನಿಧಿ-2026’ರ ಅಂತಿಮ ಸುತ್ತಿಗೆ ಆಯ್ಕೆಯಾಗಿವೆ.

ವಿದ್ಯಾರ್ಥಿಗಳು, ಯುವ ಉದ್ಯಮಿಗಳು ಹಾಗೂ ಸ್ಟಾರ್ಟ್‌ಅಪ್ ಸಂಸ್ಥಾಪಕರಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ‘ಮಂಥನ್’ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿರುವ ಉದ್ಯಮ ಕಲ್ಪನೆಗಳನ್ನು ಹೊರತಂದು, ಹೊಸ ಉದ್ಯಮ ಆರಂಭಿಸಲು ಅಗತ್ಯವಾದ ಮಾರ್ಗದರ್ಶನ, ಪ್ರೋತ್ಸಾಹ ಹಾಗೂ ಬೆಂಬಲ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ. 2007ರಿಂದ ನಡೆಯುತ್ತಿರುವ ಈ ಸ್ಪರ್ಧೆಯು ಈ ವರ್ಷ 18ನೇ ಆವೃತ್ತಿಗೆ ಕಾಲಿಟ್ಟಿದೆ.

ವಿಶ್ವವಿದ್ಯಾಲಯದ ಮೊದಲ ತಂಡವು ಕೃತಕ ಬುದ್ಧಿಮತ್ತೆ ಮತ್ತು ಇಂಟರ್‌ನೆಟ್ ಆಫ್ ಥಿಂಗ್ಸ್ ಆಧಾರಿತ ಸಾರ್ವಜನಿಕ ಸಾರಿಗೆ ಪರಿಹಾರವನ್ನು ಅಭಿವೃದ್ಧಿಪಡಿಸಿದೆ. ಈ ವ್ಯವಸ್ಥೆಯ ಮೂಲಕ ಬಸ್‌ಗಳ ನೈಜ-ಸಮಯದ ಸ್ಥಳ ಮಾಹಿತಿ, ಅಂದಾಜು ಆಗಮನದ ಸಮಯ, ಪ್ರಯಾಣಿಕರ ದಟ್ಟಣೆಯ ಮಾಹಿತಿ, ಸ್ಮಾರ್ಟ್ ಮಾರ್ಗ ಶಿಫಾರಸುಗಳು ಹಾಗೂ ತುರ್ತು ಎಚ್ಚರಿಕೆ ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಒದಗಿಸುವ ಉದ್ದೇಶ ಹೊಂದಿದೆ.

ಸುಮಾರು 1,000 ಪ್ರಯಾಣಿಕರ ಸಮೀಕ್ಷೆಯ ಆಧಾರದ ಮೇಲೆ ರೂಪಿಸಲಾಗಿರುವ ಈ ಯೋಜನೆಯು ಸಾರ್ವಜನಿಕ ಬಸ್ ಪ್ರಯಾಣವನ್ನು ಹೆಚ್ಚು ಸುರಕ್ಷಿತ, ಚುರುಕಾದ ಮತ್ತು ವಿಶ್ವಾಸಾರ್ಹವಾಗಿಸುವ ಗುರಿ ಹೊಂದಿದೆ. ಎಂಬಿಎ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಕು. ಸೃಷ್ಟಿ ಪ್ರಿಯಾ, ಶ್ರೀ ಅಜರ್ ಇಕ್ಬಾಲ್ ಹಾಗೂ ಎಂಬಿಎ (ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣೆ) ದ್ವಿತೀಯ ವರ್ಷದ ವಿದ್ಯಾರ್ಥಿ ಮುಕೇಶ್ ಜಿ. ಅವರು ಈ ಯೋಜನೆಯನ್ನು ಅಭಿವೃದ್ಧಿಪಡಿಸಿದ್ದಾರೆ.

ಎರಡನೇ ತಂಡವು ‘ಒಂದು ಯೋಜನೆ, ಒಂದು ಪಾವತಿ, ಸಂಪೂರ್ಣ ಪ್ರವಾಸ’ ಎಂಬ ಪರಿಕಲ್ಪನೆಯಡಿ ದಿನದ ಪ್ರವಾಸಗಳನ್ನು ಸರಳ, ಅನುಕೂಲಕರ ಮತ್ತು ಆನಂದದಾಯಕವಾಗಿಸುವ ಸಮಗ್ರ ಪ್ರವಾಸ ವೇದಿಕೆಯನ್ನು ಅಭಿವೃದ್ಧಿಪಡಿಸಿದೆ. ಸ್ಥಳಗಳ ಆಯ್ಕೆ, ಪ್ರವಾಸ ಯೋಜನೆ, ಸಾರಿಗೆ ಕಾಯ್ದಿರಿಸುವಿಕೆ, ಹೋಟೆಲ್, ಪ್ರವಾಸಿ ತಾಣಗಳ ಟಿಕೆಟ್ ಹಾಗೂ ಊಟದ ವ್ಯವಸ್ಥೆ ಸೇರಿದಂತೆ ವಿವಿಧ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒಂದೇ ಪಾವತಿಯ ಮೂಲಕ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಈ ಯೋಜನೆಯನ್ನು ಬೆಂಗಳೂರು, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಇತರ ಪ್ರಮುಖ ನಗರಗಳಿಗೂ ವಿಸ್ತರಿಸುವ ಸಿದ್ಧತೆ ನಡೆಸಲಾಗಿದೆ. ಪ್ರವಾಸಿಗರಿಗೆ ಸುಗಮ ಮತ್ತು ಕೈಗೆಟುಕುವ ಪ್ರಯಾಣದ ಅನುಭವ ಒದಗಿಸುವ ಜೊತೆಗೆ 20 ಲಕ್ಷ ಬಳಕೆದಾರರನ್ನು ತಲುಪುವ, ಒಂದು ಲಕ್ಷ ಕಾಯ್ದಿರಿಸುವಿಕೆಗಳನ್ನು ಸಾಧಿಸುವ ಹಾಗೂ ವಾರ್ಷಿಕ 4.50 ಕೋಟಿ ರೂ. ಆದಾಯ ಗಳಿಸುವ ಗುರಿಯನ್ನು ತಂಡ ಹೊಂದಿದೆ.

ಸಂಪೂರ್ಣ ಯಾತ್ರಾ ಸ್ಟಾರ್ಟ್‌ಅಪ್‌ಗಾಗಿ ಎಂಬಿಎ (ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣೆ) ವಿದ್ಯಾರ್ಥಿ ಗುರುರಾಜು ಲಕ್ಷ್ಮಣರಾವ್, ಕಂಪ್ಯೂಟರ್ ವಿಜ್ಞಾನ ವಿಭಾಗದ ಪ್ರಿನ್ಸ್ ಕುಮಾರ್, ಇತಿಹಾಸ ಮತ್ತು ಪುರಾತತ್ವ ವಿಭಾಗದ ಉನ್ನತ ಯೋಗೇಶ್ವರರಾವ್ ಹಾಗೂ ವ್ಯವಹಾರ ಅಧ್ಯಯನ ವಿಭಾಗದ ಮುಂಡ್ಯ ವಿಠಲ್ ಅವರು ಜಂಟಿಯಾಗಿ ಯೋಜನೆಯನ್ನು ಅಭಿವೃದ್ಧಿಪಡಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಂತಿಮ ಪ್ರಸ್ತುತಿ ಸುತ್ತಿನಲ್ಲಿ ಎರಡೂ ತಂಡಗಳು ಖ್ಯಾತ ಉದ್ಯಮ ತಜ್ಞರು ಹಾಗೂ ಹೂಡಿಕೆದಾರರನ್ನು ಒಳಗೊಂಡ ತೀರ್ಪುಗಾರರ ಸಮಿತಿಯ ಮುಂದೆ ತಮ್ಮ ಸ್ಟಾರ್ಟ್‌ಅಪ್ ಪರಿಕಲ್ಪನೆಗಳನ್ನು ಮಂಡಿಸಿದವು. ಯೋಜನೆಗಳ ನಾವೀನ್ಯತೆ, ಸಾಮಾಜಿಕ ಪ್ರಸ್ತುತತೆ ಹಾಗೂ ಮಾರುಕಟ್ಟೆ ಸಾಮರ್ಥ್ಯವನ್ನು ತೀರ್ಪುಗಾರರು ಮೆಚ್ಚಿಕೊಂಡಿದ್ದಾರೆ. ಇದೇ ವೇಳೆ ಎಫ್‌ಕೆಸಿಸಿಐ ಅಧ್ಯಕ್ಷೆ ಶ್ರೀಮತಿ ಉಮಾ ರೆಡ್ಡಿ ಅವರೊಂದಿಗೆ ಸಂವಾದ ನಡೆಸುವ ಅವಕಾಶವೂ ವಿದ್ಯಾರ್ಥಿಗಳಿಗೆ ದೊರೆಯಿತು.

ಎಫ್‌ಕೆಸಿಸಿಐ ವತಿಯಿಂದ ಅಂತಿಮವಾಗಿ ಆಯ್ಕೆಯಾಗುವ ತಂಡಗಳಿಗೆ 25 ಲಕ್ಷ ರೂ. ಬಹುಮಾನ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಗುತ್ತದೆ.

ಈ ಸಾಧನೆಗೆ ಸಂತಸ ವ್ಯಕ್ತಪಡಿಸಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿಶ್ವವಿದ್ಯಾಲಯಕ್ಕೆ ಇದೊಂದು ಹೆಮ್ಮೆಯ ಸಂಗತಿಯಾಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ-2020ರ ಆಶಯದಂತೆ ವಿದ್ಯಾರ್ಥಿಗಳು ಶೈಕ್ಷಣಿಕ ಕಲಿಕೆಯ ಜೊತೆಗೆ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಹೇಳಿದರು.

ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್, ವಾಣಿಜ್ಯ ವ್ಯವಹಾರ ಅಧ್ಯಯನ ನಿಕಾಯದ ಡೀನ್ ಪ್ರೊ. ಪಾಂಡುರಂಗ ಪತ್ತಿ, ವಿಭಾಗದ ಮುಖ್ಯಸ್ಥ ಪ್ರೊ. ವಿಜಯಕುಮಾರ್ ಹಾಗೂ ಸಹ ಪ್ರಾಧ್ಯಾಪಕ ಮತ್ತು ಸ್ಟಾರ್ಟ್‌ಅಪ್ ಮಾರ್ಗದರ್ಶಕ ಡಾ. ಗಣಪತಿ ಸಿನ್ನೂರು ಅವರು ಎರಡೂ ತಂಡಗಳ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button