ಸುರಕ್ಷಿತ, ಗುಣಮಟ್ಟದ ಬಸ್ ಸೇವೆಗೆ ಆದ್ಯತೆ ನೀಡಿ: ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ್ ಎಂ.ವೈ. ಪಾಟೀಲ್
ಪ್ರಯಾಣಿಕ ಸ್ನೇಹಿ ಸೇವೆ, ಸುರಕ್ಷಿತ ಚಾಲನೆ, ಸ್ವಚ್ಛತೆ ಹಾಗೂ ದೂರುಗಳ ತ್ವರಿತ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ

ಪ್ರಯಾಣಿಕರಿಗೆ ಸುರಕ್ಷಿತ, ಗುಣಮಟ್ಟದ ಹಾಗೂ ಸಮಯೋಚಿತ ಬಸ್ ಸಾರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್ಟಿಸಿ) ಅಧ್ಯಕ್ಷ ಅರುಣಕುಮಾರ್ ಎಂ.ವೈ. ಪಾಟೀಲ್ ಸೂಚನೆ ನೀಡಿದರು.
ನಿಗಮದ ಕೇಂದ್ರ ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರ ಉಪಸ್ಥಿತಿಯಲ್ಲಿ ಇಲಾಖಾ ಮುಖ್ಯಸ್ಥರು ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಸ್ಗಳನ್ನು ನಿಗದಿತ ಬಸ್ ನಿಲ್ದಾಣಗಳಲ್ಲಿಯೇ ನಿಲ್ಲಿಸಿ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಿದರು.
ಪ್ರಯಾಣಿಕರು ಬಸ್ ಕಿಟಕಿಗಳಿಂದ ತಲೆ ಅಥವಾ ಕೈಗಳನ್ನು ಹೊರಹಾಕದಂತೆ ಚಾಲಕರು ಹಾಗೂ ನಿರ್ವಾಹಕರು ಕಾಲಕಾಲಕ್ಕೆ ಸುರಕ್ಷತಾ ಸೂಚನೆಗಳನ್ನು ನೀಡಬೇಕು. ಅತಿವೇಗ ಮತ್ತು ನಿರ್ಲಕ್ಷ್ಯ ಚಾಲನೆಯನ್ನು ಸಂಪೂರ್ಣ ತಡೆದು ಸುರಕ್ಷಿತ ಚಾಲನೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಇಂಧನ ಉಳಿತಾಯಕ್ಕೆ ವಿಶೇಷ ಗಮನ ಹರಿಸಿ, ಆರ್ಥಿಕ ಹಾಗೂ ಸುರಕ್ಷಿತ ಚಾಲನಾ ಕ್ರಮಗಳನ್ನು ಅನುಸರಿಸುವ ಮೂಲಕ ಇಂಧನ ದಕ್ಷತೆಯನ್ನು ಹೆಚ್ಚಿಸಬೇಕು. ಅನಗತ್ಯ ಇಂಧನ ವ್ಯರ್ಥವಾಗದಂತೆ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ಶಕ್ತಿ ಯೋಜನೆ ಅಡಿ ಪ್ರಯಾಣಿಸುವ ಮಹಿಳೆಯರಿಂದ ಬರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ಪರಿಹರಿಸಬೇಕು. ಮಹಿಳಾ ಪ್ರಯಾಣಿಕರೊಂದಿಗೆ ಚಾಲಕರು ಹಾಗೂ ನಿರ್ವಾಹಕರು ಸೌಜನ್ಯ, ಗೌರವ ಮತ್ತು ಮಾನವೀಯತೆಯಿಂದ ವರ್ತಿಸಬೇಕು. ಯಾವುದೇ ರೀತಿಯ ಅಸಭ್ಯ ಅಥವಾ ನಿರ್ಲಕ್ಷ್ಯದ ವರ್ತನೆಗೆ ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದರು.
ಬಸ್ಗಳ ಬಾಹ್ಯ ಹಾಗೂ ಆಂತರಿಕ ಸ್ವಚ್ಛತೆಗೆ ಸಮಾನ ಮಹತ್ವ ನೀಡಿ, ಪ್ರತಿಯೊಂದು ವಾಹನವನ್ನು ಶುಚಿಯಾಗಿ ಹಾಗೂ ಪ್ರಯಾಣಿಕ ಸ್ನೇಹಿಯಾಗಿ ನಿರ್ವಹಿಸಬೇಕು. ಸಾರ್ವಜನಿಕರಿಂದ ಬರುವ ದೂರುಗಳು, ಸಲಹೆಗಳು ಹಾಗೂ ಅಭಿಪ್ರಾಯಗಳನ್ನು ಪರಿಶೀಲಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯ ಅಂತ್ಯದಲ್ಲಿ, “ಸುರಕ್ಷಿತ ಸಂಚಾರ – ಗುಣಮಟ್ಟದ ಸೇವೆ – ಪ್ರಯಾಣಿಕರ ತೃಪ್ತಿಯೇ ನಮ್ಮ ಆದ್ಯತೆ” ಎಂಬ ಧ್ಯೇಯದೊಂದಿಗೆ ನಿಗಮದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮನ್ವಯದಿಂದ, ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ ಜನವಿಶ್ವಾಸಕ್ಕೆ ತಕ್ಕ ಅತ್ಯುತ್ತಮ ಸಾರಿಗೆ ಸೇವೆ ನೀಡುವಂತೆ ಅರುಣಕುಮಾರ್ ಎಂ.ವೈ. ಪಾಟೀಲ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.



