ಎಐಗೆ ಅತಿಯಾದ ಅವಲಂಬನೆ ಬೇಡ; ಗ್ರಂಥಾಲಯಗಳ ಮೂಲಕ ಜ್ಞಾನ ವೃದ್ಧಿಸಿಕೊಳ್ಳಿ: ಶಿಕ್ಷಕರಿಗೆ ಕರೆ
ಕೇಂದ್ರ ವಿಶ್ವವಿದ್ಯಾಲಯದಲ್ಲಿ ನೂತನ ಅಧ್ಯಾಪಕರಿಗೆ ಇ-ಸಂಪನ್ಮೂಲ ಬಳಕೆ ಕಾರ್ಯಾಗಾರ; ಸಂಶೋಧನೆಯಲ್ಲಿ ಮೂಲಭೂತ ಅಧ್ಯಯನಕ್ಕೆ ಒತ್ತು

ಕಲಬುರಗಿ, ಜು.27: ಶಿಕ್ಷಕರು ಕೃತಕ ಬುದ್ಧಿಮತ್ತೆ (AI) ಮೇಲೆ ಅತಿಯಾದ ಅವಲಂಬನೆ ಬೆಳೆಸಿಕೊಳ್ಳದೆ, ಗ್ರಂಥಾಲಯಗಳು ಹಾಗೂ ಮೂಲ ಸಂಶೋಧನಾ ಸಂಪನ್ಮೂಲಗಳ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಕರೆ ನೀಡಿದರು.
ಕೇಂದ್ರ ವಿಶ್ವವಿದ್ಯಾಲಯದಲ್ಲಿ ಹೊಸದಾಗಿ ನೇಮಕಗೊಂಡ ಅಧ್ಯಾಪಕರಿಗಾಗಿ ಆಯೋಜಿಸಿದ್ದ ಗ್ರಂಥಾಲಯ ಇ-ಸಂಪನ್ಮೂಲಗಳ ಬಳಕೆ ಕುರಿತ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಜವಾಬ್ದಾರಿಯಿಂದ ಬಳಸಬೇಕು. ಆದರೆ ಬೋಧನೆ, ಸಂಶೋಧನೆ ಹಾಗೂ ಶೈಕ್ಷಣಿಕ ಬರವಣಿಗೆಯಲ್ಲಿ ಸಂಪೂರ್ಣವಾಗಿ AI ಮೇಲೆ ಅವಲಂಬಿಸುವುದು ಸೂಕ್ತವಲ್ಲ ಎಂದರು.
ಗ್ರಂಥಾಲಯಗಳು, ಪುಸ್ತಕಗಳು ಮತ್ತು ಮೂಲ ಸಂಶೋಧನೆಗಳ ಮೂಲಕ ಜ್ಞಾನ ಸಂಪಾದಿಸುವುದು ಶಿಕ್ಷಕರಲ್ಲಿ ವಿಮರ್ಶಾತ್ಮಕ ಚಿಂತನೆ, ವಿಶ್ಲೇಷಣಾ ಸಾಮರ್ಥ್ಯ ಹಾಗೂ ಸೃಜನಶೀಲತೆಯನ್ನು ಬೆಳೆಸುತ್ತದೆ. ಇವುಗಳೇ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಗೆ ಭದ್ರ ಅಡಿಪಾಯವಾಗಿವೆ ಎಂದು ಅವರು ತಿಳಿಸಿದರು.
ಭಾರತ ಸರ್ಕಾರದ ‘ಒನ್ ನೇಷನ್ ಒನ್ ಸಬ್ಸ್ಕ್ರಿಪ್ಷನ್ (ONOS)’ ಯೋಜನೆಯಡಿ 13 ಸಾವಿರಕ್ಕೂ ಹೆಚ್ಚು ಅಂತರರಾಷ್ಟ್ರೀಯ ಸಂಶೋಧನಾ ಜರ್ನಲ್‌ಗಳು ಲಭ್ಯವಿದ್ದು, ಅಧ್ಯಾಪಕರು ಹಾಗೂ ಸಂಶೋಧಕರು ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಿಂದೆ ಸಂಶೋಧನಾ ಮಾಹಿತಿಗಾಗಿ ವಿವಿಧ ರಾಷ್ಟ್ರೀಯ ಗ್ರಂಥಾಲಯಗಳಿಗೆ ತೆರಳಿ ಅನೇಕ ಪುಸ್ತಕಗಳನ್ನು ಅಧ್ಯಯನ ಮಾಡಬೇಕಾಗುತ್ತಿತ್ತು. ಆದರೆ ಈಗ ಡಿಜಿಟಲ್ ತಂತ್ರಜ್ಞಾನದ ಮೂಲಕ ಗುಣಮಟ್ಟದ ಶೈಕ್ಷಣಿಕ ಸಂಪನ್ಮೂಲಗಳು ಸುಲಭವಾಗಿ ದೊರೆಯುತ್ತಿವೆ. ಈ ಸೌಲಭ್ಯಗಳನ್ನು ಬೋಧನೆ, ಸಂಶೋಧನೆ ಮತ್ತು ನವೀನ ಆವಿಷ್ಕಾರಗಳಿಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಸಂಶೋಧನೆಯಲ್ಲಿ ಕೃತಿಚೌರ್ಯವನ್ನು ತಪ್ಪಿಸಿ, ಸ್ವಂತ ಆಲೋಚನೆ ಮತ್ತು ಮೂಲ ಬರವಣಿಗೆಯ ಮೂಲಕ ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವಂತಹ ಸಂಶೋಧನೆ ನಡೆಸಬೇಕು. ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಅತ್ಯಾಧುನಿಕ ಸಂಶೋಧನಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಜರ್ನಲ್‌ಗಳಲ್ಲಿ ಗುಣಮಟ್ಟದ ಸಂಶೋಧನಾ ಲೇಖನಗಳನ್ನು ಪ್ರಕಟಿಸುವತ್ತ ಅಧ್ಯಾಪಕರು ಗಮನಹರಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥ ಹಾಗೂ ವ್ಯವಹಾರ ಅಧ್ಯಯನ ನಿಕಾಯದ ಡೀನ್ ಪ್ರೊ. ಪಾಂಡುರಂಗ ವಿ. ಮಾತನಾಡಿ, ಡಿಜಿಟಲ್ ಸಂಪನ್ಮೂಲಗಳ ಲಭ್ಯತೆಯಿಂದ ಸಂಶೋಧನಾ ಕಾರ್ಯ ಮತ್ತಷ್ಟು ಸುಲಭವಾಗಿದೆ ಎಂದರು. ONOS ಯೋಜನೆಯಿಂದ ಸಾವಿರಾರು ಅಂತರರಾಷ್ಟ್ರೀಯ ಜರ್ನಲ್‌ಗಳು ಸುಲಭವಾಗಿ ಲಭ್ಯವಾಗುತ್ತಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಕೇಂದ್ರ ಗ್ರಂಥಾಲಯದ ಮುಖ್ಯಸ್ಥ ಡಾ. ಪಿ.ಎಸ್. ಕಟ್ಟಿಮನಿ ಗ್ರಂಥಾಲಯದಲ್ಲಿರುವ ಇ-ಜರ್ನಲ್‌ಗಳು, ಆನ್‌ಲೈನ್ ಡೇಟಾಬೇಸ್‌ಗಳು, ಕೃತಿಚೌರ್ಯ ಪತ್ತೆ ಸಾಧನಗಳು, ವ್ಯಾಕರಣ ತಿದ್ದುಪಡಿ ತಂತ್ರಾಂಶ ಸೇರಿದಂತೆ ವಿವಿಧ ಡಿಜಿಟಲ್ ಸೌಲಭ್ಯಗಳ ಕುರಿತು ವಿವರಿಸಿದರು.
ಕಾರ್ಯಾಗಾರದಲ್ಲಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ನೂತನ ಅಧ್ಯಾಪಕರು, ಗ್ರಂಥಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿ ಇ-ಸಂಪನ್ಮೂಲಗಳ ಬಳಕೆ ಮತ್ತು ಸಂಶೋಧನಾ ಸೇವೆಗಳ ಕುರಿತು ಮಾಹಿತಿ ಪಡೆದರು.



