ಕೆಬಿಎಸ್ ಬ್ಯಾಂಕ್ ಇಬ್ಬರು ಅಧಿಕಾರಿಗಳೂ ಸೇರಿ 15 ಮಂದಿಯನ್ನು ಬಂಧಿಸಬೇಕು: ಗುಂಡೂರಕರ ಆಗ್ರಹ
ಬ್ಯಾಂಕ್ ಅಕ್ರಮ, ಹಣ ದುರ್ಬಳಕೆ ಮತ್ತು ದಾಖಲೆಗಳ ನಕಲಿ ಆರೋಪಗಳ ಕುರಿತು ಕಠಿಣ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯ

ಕೆಬಿಎಸ್ ಬ್ಯಾಂಕ್‌ನಲ್ಲಿ ನಡೆದಿವೆ ಎನ್ನಲಾದ ಅಕ್ರಮ, ಹಣಕಾಸು ಅವ್ಯವಹಾರ ಮತ್ತು ನಕಲಿ ದಾಖಲೆಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ನ ಇಬ್ಬರು ಅಧಿಕಾರಿಗಳು ಸೇರಿದಂತೆ ಒಟ್ಟು 15 ಮಂದಿಯನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಯುವ ಶಕ್ತಿ ಸೇನೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ನ್ಯಾಯವಾದಿ ಲಿಂಗರಾಜ್ ಬಿ. ಗುಂಡೂರಕರ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 25ರಂದು 13 ಮಂದಿಯ ವಿರುದ್ಧ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 2024ರ ಜುಲೈ 9ರಂದು ಬ್ಯಾಂಕ್ ವ್ಯವಸ್ಥಾಪಕರು ಹಾಗೂ ವಕೀಲರ ವಿರುದ್ಧ ಕಮಲಾಪುರ ಪೊಲೀಸ್ ಠಾಣೆಯಲ್ಲಿಯೂ ಮತ್ತೊಂದು ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.
2024ರ ಸೆಪ್ಟೆಂಬರ್ 29ರಂದು ಕೆಬಿಎಸ್ ಬ್ಯಾಂಕ್‌ನ ಕೆಲ ಅಧಿಕಾರಿಗಳು ಪ್ರಮುಖ ಆರೋಪಿಗಳನ್ನು ಕೈಬಿಟ್ಟು ಸಾಮಾನ್ಯ ಸಿಬ್ಬಂದಿಯೊಬ್ಬರನ್ನು ಮಾತ್ರ ಬಂಧಿಸಿದ್ದು, ಎರಡು ವರ್ಷಗಳಾದರೂ ತನಿಖೆ ಪೂರ್ಣಗೊಳ್ಳದೆ ಆರೋಪಪಟ್ಟಿ ಸಲ್ಲಿಸಿಲ್ಲ ಎಂದು ಅವರು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಟಿ.ಆರ್.ವಿ. ಸತ್ಯನಾರಾಯಣ, ದುರ್ಗಾಪ್ರಸಾದ್, ಆರ್. ಅನುರಾಧಾ, ಜೆ. ಮುರುಳಿಕೃಷ್ಣ, ವಂದನಾ, ಎಲ್. ರಾಮಮೋಹನರಾವ್, ಬಿ. ಸುಧಾಕರ್, ಶ್ರೀನಿವಾಸರಾವ್, ಜೋಶಿ, ವಿದ್ಯಾಸಾಗರ್ ಸೇರಿದಂತೆ 13 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಇನ್ನಿಬ್ಬರು ಬ್ಯಾಂಕ್ ಅಧಿಕಾರಿಗಳ ಪಾತ್ರವೂ ಇರುವುದರಿಂದ ಅವರ ಹೆಸರನ್ನೂ ಸೇರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಒಟ್ಟು 15 ಮಂದಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯಿದ್ದು, ಎರಡು ತಿಂಗಳು ಕಳೆದರೂ ಯಾವುದೇ ಆರೋಪಿಗಳಿಗೆ ನೋಟಿಸ್ ನೀಡಿಲ್ಲ ಅಥವಾ ಬಂಧಿಸಿಲ್ಲ ಎಂದು ದೂರಿದರು. ಜಾಮೀನು ರಹಿತ ಅಪರಾಧಗಳಿದ್ದರೂ ತನಿಖೆ ವಿಳಂಬವಾಗುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದರು.
ತಮ್ಮ ಸಹಿ ಹಾಗೂ ದಾಖಲೆಗಳನ್ನು ನಕಲಿ ಮಾಡಿ ಸುಳ್ಳು ದಾಖಲೆ ಸೃಷ್ಟಿಸಿ ಅದರ ಆಧಾರದ ಮೇಲೆ 2025ರ ಡಿಸೆಂಬರ್ 17ರಂದು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಆರೋಪಿಸಿದ ಅವರು, ತಮ್ಮ ವಿರುದ್ಧ ಸಂಚು ರೂಪಿಸಲಾಗಿದೆ ಎಂದು ಹೇಳಿದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 6ರಂದು ತಮ್ಮ ನಿವಾಸಕ್ಕೆ ಬಂದು ಬೆದರಿಕೆ ಹಾಕುವ ಪ್ರಯತ್ನವೂ ನಡೆದಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇನ್ನೊಂದು ಪ್ರಕರಣವನ್ನು ಉಲ್ಲೇಖಿಸಿದ ಅವರು, ಬ್ಯಾಂಕ್‌ನ ಗ್ರಾಹಕರಾದ ಗಣೇಶ್ ರಾಠೋಡ್ ಹಾಗೂ ರಾಜೇಶ್ ರಾಠೋಡ್ ಅವರ ಖಾತೆಯಿಂದ ಅವರ ಅನುಮತಿ ಇಲ್ಲದೆ ಸುಮಾರು ₹84 ಲಕ್ಷ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವೂ ದಾಖಲಾಗಿದೆ ಎಂದು ಹೇಳಿದರು. ಈ ಪ್ರಕರಣದಲ್ಲಿ ಬ್ಯಾಂಕ್ ಸಿಬ್ಬಂದಿ ಹಾಗೂ ಅಧಿಕಾರಿಗಳ ಪಾತ್ರವನ್ನು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
2024ರ ಸೆಪ್ಟೆಂಬರ್ 29ರಂದು ನಡೆದ ಮತ್ತೊಂದು ಪ್ರಕರಣದಲ್ಲಿ ಮೂವರ ಕಿರುಕುಳದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದರೂ ಪ್ರಮುಖ ಆರೋಪಿಗಳನ್ನು ಬಂಧಿಸದೆ ಒಬ್ಬರನ್ನಷ್ಟೇ ಬಂಧಿಸಲಾಗಿದೆ ಎಂದು ಆರೋಪಿಸಿದ ಅವರು, ಎರಡು ವರ್ಷಗಳಾದರೂ ಆರೋಪಪಟ್ಟಿ ಸಲ್ಲಿಸದಿರುವುದು ತನಿಖೆಯ ಮೇಲಿನ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ಕೆಬಿಎಸ್ ಬ್ಯಾಂಕ್‌ನಲ್ಲಿ ನಡೆದಿರುವ ಎಲ್ಲಾ ಆರೋಪಿತ ಅವ್ಯವಹಾರಗಳ ಕುರಿತು ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು, ಸಂಬಂಧಿಸಿದ 15 ಮಂದಿಯನ್ನು ಕೂಡಲೇ ಬಂಧಿಸಬೇಕು. ಜೊತೆಗೆ ಬ್ಯಾಂಕ್‌ನಲ್ಲಿ ನಡೆದಿರುವ ಹಣಕಾಸು ಅಕ್ರಮಗಳ ಕುರಿತು ರಾಜ್ಯ ಸರ್ಕಾರವೂ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಗುಂಡೂರಕರ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಅಶ್ವತ್ಥ ಡಿ. ಮಾಡ್ಯಾಳಕರ, ಜಗನ್ನಾಥರೆಡ್ಡಿ ಉಡಬಾಳ, ಶಂಕರ ಮರತೂರು, ಶರಣಪ್ಪ ಹೊಕ್ರಾಣಿ, ಸಂಜೀವಕುಮಾರ್ ಶುಕ್ಲಾ, ಮನೋಜ್ ಕುಮಾರ್ ಹತ್ತಿ, ದಯಾನಂದ ಅಂಕಲಗಿ, ಅಂಬರೀಷ್ ಕಾಶಿರಾಯ ಸಂಗೊಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



