ಜಿಲ್ಲಾಸುದ್ದಿ

೩೩ ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆ ವಿತರಣೆ: ಸದ್ಬಳಕೆಗೆ ಫಾದರ್ ಸಂತೋಷ ಬಾಪು ಕರೆ

ಕಲಬುರ್ಗಿ, ಸೆ.೧೦- ಮಕ್ಕಳಿಗೆ ವಿತರಿಸಲಾಗುತ್ತಿರುವ ಸಾಧನ ಸಲಕರಣೆಗಳನ್ನು ಪಾಲಕರು ಸಮರ್ಪಕವಾಗಿ ಬಳಸಿಕೊಂಡು, ಮಕ್ಕಳಿಗೆ ನಿಯಮಿತವಾಗಿ ಉತ್ತೇಜಕ ಚಟುವಟಿಕೆಗಳನ್ನು ನೀಡಬೇಕು. ಇದರಿಂದ ಮಕ್ಕಳ ಸಾಮರ್ಥ್ಯವನ್ನು ಬೆಳೆಸಲು ಹಾಗೂ ಸ್ವಾವಲಂಬಿ ಜೀವನಕ್ಕೆ ಸಿದ್ಧಗೊಳಿಸಲು ಸಹಕಾರಿಯಾಗುತ್ತದೆ ಎಂದು ಧರ್ಮಕ್ಷೇತ್ರದ ಫಾದರ್ ಸಂತೋಷ ಬಾಪು ಅವರು ಹೇಳಿದರು.

ನಗರದ ಮದರ್ ತೆರೇಸಾ ಸಭಾಂಗಣದಲ್ಲಿ ಸೇವಾ ಸಂಗಮ ಸಂಸ್ಥೆ ಹಾಗೂ ಅಜೀಂ ಪ್ರೇಮ್‌ಜೀ ಫೌಂಡೇಶನ್ ವತಿಯಿಂದ ಬುಧವಾರ ೩೩ ಮಕ್ಕಳಿಗೆ ವಿವಿಧ ಸಾಧನ ಸಲಕರಣೆಗಳ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಅಭಿವೃದ್ಧಿಗಾಗಿ ವಿವಿಧ ಸಂಸ್ಥೆಗಳು ಒಗ್ಗೂಡಿ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತಂದು ಹೊಸ ಚಿಗುರನ್ನು ಮೂಡಿಸುವುದು ಎಲ್ಲರ ಉದ್ದೇಶವಾಗಿದೆ ಎಂದರು.

ಅಜೀo ಪ್ರೇಮ್‌ಜೀ ಫೌಂಡೇಶನ್‌ನ ಕಲ್ಯಾಣ ಕರ್ನಾಟಕ ಭಾಗದ ಕಾರ್ಯಕ್ರಮಗಳ ರಾಜ್ಯ ಸಂಯೋಜಕ ಸಂಜೀವ್ ಕುಲಕರ್ಣಿ ಅವರು ಮಾತನಾಡಿ, ಬೆಳವಣಿಗೆಯಲ್ಲಿ ಕುಂಠಿತವಿರುವ ಮಕ್ಕಳ ಅಭಿವೃದ್ಧಿಗಾಗಿ ಸೇವಾ ಸಂಗಮ ಸಂಸ್ಥೆಯ ಮೂಲಕ ಕೈಗೊಳ್ಳುತ್ತಿರುವ ಕಾರ್ಯಗಳು ಶ್ಲಾಘನೀಯವಾಗಿವೆ. ಮಕ್ಕಳ ಅಭಿವೃದ್ಧಿಗಾಗಿ ಇಂತಹ ಸಹಯೋಗದ ಕಾರ್ಯಕ್ರಮಗಳು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಯಬೇಕು ಎಂದು ಹೇಳಿದರು.

ಸೇವಾ ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ವಿಕ್ಟರ್ ವಾಸ್ ಅವರು ಮಾತನಾಡಿ, ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಪಾಲಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳನ್ನು ಪ್ರೀತಿ, ಮಮತೆ ಮತ್ತು ವಾತ್ಸಲ್ಯದಿಂದ ಆರೈಕೆ ಮಾಡುತ್ತಿರುವ ಪಾಲಕರೊಂದಿಗೆ ಸೇವಾ ಸಂಗಮ ಸಂಸ್ಥೆಯು ಮಕ್ಕಳ ಅಭಿವೃದ್ಧಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ವಿತರಿಸಲಾದ ಸಾಧನ ಸಲಕರಣೆಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮಕ್ಕಳಿಗೆ ಪ್ರತಿದಿನ ಅಭಿವೃದ್ಧಿಪರ ಚಟುವಟಿಕೆಗಳನ್ನು ನೀಡಬೇಕು. ಮಕ್ಕಳ ಪ್ರಗತಿಯನ್ನು ಪರಿಶೀಲಿಸಿ ಅಗತ್ಯ ಮಾರ್ಗದರ್ಶನ ಪಡೆಯಲು ಪಾಲಕರು ವಾರದಲ್ಲಿ ಕನಿಷ್ಠ ಒಂದು ಬಾರಿಯಾದರೂ ಮಕ್ಕಳೊಂದಿಗೆ ಚೇತನ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಫಾದರ್ ಪ್ರವೀಣ್, ಫಾದರ್ ಸ್ಟ್ಯಾನಿ ಲೋಬೊ, ಫಾದರ್ ಆಲ್ಬರ್ಟ್, ಅನಿಲ್, ಶ್ರೀಮತಿ ನೇತ್ರ ಅವರೂ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಶ್ರೀಮತಿ ಶ್ವೇತಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿತಾ ಅವರು ಕಾರ್ಯಕ್ರಮ ನಿರೂಪಿಸಿದರು. ದಾಕ್ಷಾಯಣ ಅವರು ಸ್ವಾಗತಿಸಿದರು. ಲಕ್ಷ್ಮೀ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಪಾಲಕರು ಸೇರಿದಂತೆ ಒಟ್ಟು ೭೦ ಜನರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button