ಕಲ್ಯಾಣ ಕರ್ನಾಟಕ

ಗೋವಿಂದರಾವ್ ಸಮಿತಿ ವರದಿ ಕುರಿತು ಸಮಗ್ರ ಚಿಂತನಾ ಸಭೆ ಆ.14ಕ್ಕೆ ಮುಂದೂಡಿಕೆ

ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿ ಕುರಿತು ಮಹತ್ವದ ಚರ್ಚೆ; ಚಿಂತಕರು, ಹೋರಾಟಗಾರರು, ಗಣ್ಯರಿಗೆ ಆಹ್ವಾನ

ಕಲಬುರಗಿ, ಆ.8– ಗೋವಿಂದರಾವ್ ನೇತೃತ್ವದ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ವರದಿ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಯ ಕುರಿತು ಆಗಸ್ಟ್ 11ರಂದು ನಿಗದಿಯಾಗಿದ್ದ ದುಂಡು ಮೇಜಿನ ಸಭೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದ್ದು, ಆಗಸ್ಟ್ 14ರಂದು ಶುಕ್ರವಾರ ಬೆಳಿಗ್ಗೆ 11.15ಕ್ಕೆ ಶರಣಬಸವ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷ ಬಸವರಾಜ ದೇಶಮುಖ ಹಾಗೂ ಸಂಸ್ಥಾಪಕ ಅಧ್ಯಕ್ಷ ಡಾ. ಲಕ್ಷ್ಮಣ ದಸ್ತಿ ತಿಳಿಸಿದ್ದಾರೆ.

ಸಭೆಯಲ್ಲಿ ನಂಜುಂಡಪ್ಪ ವರದಿ ಹಾಗೂ ಗೋವಿಂದರಾವ್ ಸಮಿತಿಯ ವರದಿಗಳ ತುಲನಾತ್ಮಕ ಚರ್ಚೆ ನಡೆಯಲಿದೆ. ಗೋವಿಂದರಾವ್ ನೇತೃತ್ವದ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ವರದಿಯ ಆಧಾರದ ಮೇಲೆ ಭವಿಷ್ಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಹಾಗೂ ರಚನಾತ್ಮಕ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ನಡೆಯಲಿರುವ ಈ ಮಹತ್ವದ ದುಂಡು ಮೇಜಿನ ಸಭೆಗೆ ಪ್ರದೇಶದ ಅಭಿವೃದ್ಧಿಯ ಕುರಿತು ಚಿಂತನೆ ನಡೆಸುತ್ತಿರುವ ಚಿಂತಕರು, ಬುದ್ಧಿಜೀವಿಗಳು, ಹೋರಾಟಗಾರರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ತಪ್ಪದೇ ಭಾಗವಹಿಸಬೇಕು ಎಂದು ಜಂಟಿ ಹೇಳಿಕೆಯ ಮೂಲಕ ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button