ಜಿಲ್ಲಾಸುದ್ದಿ

ಕಬ್ಬಿಗೆ ₹5,500 ಬೆಲೆ ನಿಗದಿಗೆ ಆಗ್ರಹ: ಹುಬ್ಬಳ್ಳಿ ಹೋರಾಟಕ್ಕೆ ಅಫಜಲಪುರ ರೈತರ ಬೆಂಬಲ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಿವಾಸದ ಮುಂದೆ ನಡೆಯುವ ಹೋರಾಟದಲ್ಲಿ ಪಾಲ್ಗೊಳ್ಳಲು ದೇವಲ ಗಾಣಗಾಪುರ ಸುತ್ತಮುತ್ತಲಿನ ರೈತರು ಹುಬ್ಬಳ್ಳಿಗೆ ಪ್ರಯಾಣ

ಅಫಜಲಪುರ, ಸೆ.29: ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನಿಗದಿ ಮಾಡಬೇಕು ಹಾಗೂ ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ ₹60 ನಿಗದಿಪಡಿಸಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಬೆಂಬಲ ವ್ಯಕ್ತಪಡಿಸಿದ್ದಾರೆ.

ರೈತ ಹೋರಾಟಗಾರರಾದ ಚುನಪ್ಪ ಪೂಜಾರಿ ಹಾಗೂ ಶಶಿಕಾಂತ್ ಗುರೂಜಿ ಅವರ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನಿವಾಸದ ಮುಂದೆ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಳ್ಳಲು ಅಫಜಲಪುರ ತಾಲ್ಲೂಕಿನ ರೈತ ಮುಖಂಡರು ಹಾಗೂ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ವಾಹನಗಳ ಮೂಲಕ ಹುಬ್ಬಳ್ಳಿಯತ್ತ ತೆರಳಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಬ್ಬು ಸಾಗಾಣಿಕೆ ಟ್ರ್ಯಾಕ್ಟರ್ ಮಾಲೀಕರ ಸಂಘದ ತಾಲ್ಲೂಕು ಅಧ್ಯಕ್ಷ ಬಸವರಾಜ ಗುಡ್ಡೇವಾಡಿ, ಸರ್ಕಾರ ಸಕ್ಕರೆಗೆ ₹60 ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಹಾಗೂ ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನೀಡಬೇಕು ಎಂದು ಆಗ್ರಹಿಸಿದರು.

ಕಳೆದ ವರ್ಷದಂತೆ ಬೆಳಗಾವಿ ಭಾಗದ ರೈತರಿಗೆ ಒಂದು ಬೆಲೆ ಹಾಗೂ ಕಲಬುರಗಿ ಭಾಗದ ರೈತರಿಗೆ ಮತ್ತೊಂದು ಬೆಲೆ ನಿಗದಿಪಡಿಸಿ ತಾರತಮ್ಯ ಮಾಡಬಾರದು. ರಾಜ್ಯದ ಎಲ್ಲ ಜಿಲ್ಲೆಗಳ ರೈತರಿಗೂ ಒಂದೇ ರೀತಿಯ ಕಬ್ಬಿನ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಭೀಮರಾಯಗೌಡ ಪಾಟೀಲ ಮಾತನಾಡಿ, ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಸರ್ಕಾರ ಕಬ್ಬಿಗೆ ₹5,500 ಬೆಲೆ ನೀಡಲು ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲು ರೈತರು ಸಿದ್ಧರಾಗಿದ್ದಾರೆ ಎಂದು ಎಚ್ಚರಿಸಿದರು.

ಯುವ ಹೋರಾಟಗಾರ ಶ್ರೀಪಾದ ಶೆಂಡಗೆ ಮಾತನಾಡಿ, ಇಡೀ ದೇಶಕ್ಕೆ ಅನ್ನ ನೀಡುವ ರೈತನ ಬೆಂಬಲಕ್ಕೆ ಯುವಶಕ್ತಿ ನಿಲ್ಲಬೇಕಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರೈತರ ಹೋರಾಟದಲ್ಲಿ ಭಾಗವಹಿಸಿ ರೈತರಿಗೆ ನ್ಯಾಯ ದೊರಕಿಸಿಕೊಡಲು ಕೈಜೋಡಿಸಬೇಕು ಎಂದು ಕರೆ ನೀಡಿದರು.

ಬಸವರಾಜ ಗುಡ್ಡೇವಾಡಿ, ಅವಧೂತ ಮೂರನೇತಿ, ದಿಗಂಬರ್ ಜಮಾದಾರ್, ಭೀಮರಾಯಗೌಡ ಪಾಟೀಲ, ದತ್ತು ಶೆಂಡಗೆ, ದಿಗಂಬರ ಡಾಂಗೆ, ಶ್ರೀಪಾದ ಶೆಂಡಗೆ, ವಿಠ್ಠಲ್ ಕೋಣಸಿರಸಗಿ ಸೇರಿದಂತೆ ಹಲವು ರೈತರು ಹೋರಾಟದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಗೆ ತೆರಳಿದರು.

Related Articles

Leave a Reply

Your email address will not be published. Required fields are marked *

Back to top button