ಅಖಿಲ ಭಾರತ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮನೋಹರ್ ಬೀರನೂರರ ವಿದ್ಯಾರ್ಥಿಗಳ ಸಾಧನೆ
21 ಪದಕಗಳನ್ನು ಗೆದ್ದು ರಾಜ್ಯ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಕೀರ್ತಿ; ಸಾಧಕರಿಗೆ ಅಭಿನಂದನೆಗಳ ಮಹಾಪೂರ

ಕಲಬುರಗಿ, ಆ.2: 29ನೇ ಅಖಿಲ ಭಾರತ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಅಂತರರಾಷ್ಟ್ರೀಯ ಕರಾಟೆ ಪಟು ಮನೋಹರ್ ಕುಮಾರ್ ಬೀರನೂರ ಅವರ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ರಾಜ್ಯ ಹಾಗೂ ಕಲ್ಯಾಣ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಜುಲೈ 25 ಮತ್ತು 26ರಂದು ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ ವಿದ್ಯಾರ್ಥಿಗಳು ಒಟ್ಟು 21 ಪದಕಗಳನ್ನು ಗೆದ್ದು ಗಮನ ಸೆಳೆದಿದ್ದಾರೆ.
ಸಹನಾ ಕೋಳಕೂರ (1 ಕಂಚು), ಶ್ರೇಷ್ಠ ಬೀರನೂರ (1 ಕಂಚು), ಆರವ್ (1 ಬೆಳ್ಳಿ, 1 ಕಂಚು), ಅಭಿಷೇಕ್ (2 ಚಿನ್ನ), ಹರ್ಷಿತ್ (2 ಬೆಳ್ಳಿ), ಪ್ರಣವ್ (1 ಚಿನ್ನ, 1 ಕಂಚು), ಮಿತಾಕ್ಷಿ (1 ಕಂಚು), ವಿಜಯ್ ರಾಜ್ (1 ಕಂಚು), ಶ್ರೀಶೈಲ (1 ಚಿನ್ನ, 1 ಬೆಳ್ಳಿ), ದೇವಾಂಕ್ (1 ಬೆಳ್ಳಿ), ಸಂಜಯ್ ಎನ್. (1 ಕಂಚು), ಶ್ರೀದೇವಿ ಬಿ. (1 ಕಂಚು), ತನುಶ್ರೀ (1 ಕಂಚು) ಹಾಗೂ ಸಾನ್ವಿಕ್ ಎನ್. (1 ಕಂಚು) ಪದಕಗಳನ್ನು ತಮ್ಮದಾಗಿಸಿಕೊಂಡರು.
ಒಟ್ಟಾರೆ ತಂಡವು 4 ಚಿನ್ನ, 5 ಬೆಳ್ಳಿ ಹಾಗೂ 12 ಕಂಚಿನ ಪದಕಗಳು ಸೇರಿದಂತೆ 21 ಪದಕಗಳನ್ನು ಗೆದ್ದು ರಾಷ್ಟ್ರಮಟ್ಟದಲ್ಲಿ ಕಲಬುರಗಿ ಜಿಲ್ಲೆಯ ಪ್ರತಿಭೆಯನ್ನು ಅನಾವರಣಗೊಳಿಸಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕ್ರೀಡಾಭಿಮಾನಿಗಳು, ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಸಂಸ್ಥೆಯ ಪದಾಧಿಕಾರಿಗಳಾದ ಮಂಜುನಾಥ ನಾಲವಾರಕರ, ಅಭಯ್ ಚವ್ಹಾಣ್ ಹಾಗೂ ಶರಣ್ ರೆಡ್ಡಿ ಪ್ರಕಟಣೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.



