ಅಧಿಕಾರ ದುರುಪಯೋಗ: ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ವಜಾಕ್ಕೆ ಎಐಡಿವೈಒ ಆಗ್ರಹ

ಕಲಬುರ್ಗಿ, ಜು.೫- ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರು ತಮ್ಮ ಪುತ್ರಿಯರಿಗೆ ಸರ್ಕಾರಿ ಹುದ್ದೆ ಕೊಡಿಸಲು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದು ಹಾಗೂ ಸುಳ್ಳು ಆದಾಯ ಪ್ರಮಾಣಪತ್ರಕ್ಕೆ ಸಹಕರಿಸಿದ ಆರೋಪ ಕೇಳಿಬಂದಿದೆ. ಇದು ಕೇವಲ ವೈಯಕ್ತಿಕ ಭ್ರಷ್ಟಾಚಾರವಲ್ಲದೇ, ಇಡೀ ರಾಜ್ಯದ ಯುವಜನತೆಗೆ ಬಗೆದ ದ್ರೋಹವಾಗಿದೆ. ಆದ್ದರಿಂದ ಕೆಪಿಎಸ್ಸಿ ಅಧ್ಯಕ್ಷರನ್ನು ಈ ಕೂಡಲೇ ವಜಾಗೊಳಿಸಿ, ನ್ಯಾಯಾಂಗ ತನಿಖೆಯ ಮೂಲಕ ಅಧ್ಯಕ್ಷರಾದಿಯಾಗಿ ಈ ಕೃತ್ಯದಲ್ಲಿ ಭಾಗಿಯಾದ ಎಲ್ಲರಿಗೂ ತಕ್ಕ ಶಿಕ್ಷೆ ನೀಡಬೇಕೆಂದು ಎಐಡಿವೈಒ ಜಿಲ್ಲಾಧ್ಯಕ್ಷ ಜಗನ್ನಾಥ್ ಎಸ್.ಎಚ್., ಅವರು ಆಗ್ರಹಿಸಿದ್ದಾರೆ.
ವರ್ಷಗಳಿಂದ ಕಷ್ಟಪಟ್ಟು ಓದುತ್ತಿರುವ ಉದ್ಯೋಗಾಕಾಂಕ್ಷಿಗಳು ನೇಮಕಾತಿಗಾಗಿ ರಾಜ್ಯದಾದ್ಯಂತ ಪ್ರಬಲ ಹೋರಾಟ ನಡೆಸಿದ್ದಾರೆ. ಕೆಪಿಎಸ್ಸಿಯಲ್ಲಿನ ಭ್ರಷ್ಟಾಚಾರ ನಿರ್ಮೂಲನೆಗಾಗಿ, ಪಾರದರ್ಶಕ ನೇಮಕಾತಿಗಾಗಿ ಒತ್ತಾಯಿಸಿದ್ದಾರೆ. ಆದರೂ ಅಧ್ಯಕ್ಷರೇ ಈ ರೀತಿಯ ಸ್ವಜನ ಪಕ್ಷಪಾತದ ಹಾದಿ ತುಳಿದಿರುವುದು ರಾಜ್ಯದ ಯುವಜನತೆಯ ಆಕ್ರೋಶವನ್ನು ಹೆಚ್ಚಿಸಿದೆ. ಅಧ್ಯಕ್ಷರು-ಸದಸ್ಯರ ನಡುವೆ ಸಾಮರಸ್ಯ ಇಲ್ಲದಿರುವುದು, ನೇಮಕಾತಿ ಪ್ರಕ್ರಿಯೆಗಳಲ್ಲಿ ಅನಗತ್ಯ ವಿಳಂಬ ಮಾಡುವುದು ಮೊದಲಾದ ಆರೋಪಗಳು ಸದರಿ ಅಧ್ಯಕ್ಷರು ನೇಮಕವಾದಾಗಿನಿಂದಲೂ ಕೇಳಿಬರುತ್ತಿವೆ. ಇದೀಗ ತಮ್ಮವರ ನೇಮಕಾತಿಗಾಗಿ ಚುರುಕಾಗಿ ಪ್ರಕ್ರಿಯೆ ಮುಗಿಸಿರುವುದರಿಂದ ಕೆಪಿಎಸ್ಸಿ ಮೇಲೆ ಯಾವುದೇ ವಿಶ್ವಾಸ ಇಲ್ಲದಂತಾಗಿದೆ. ಇಂತಹ ಎಲ್ಲ ಘಟನೆಗಳಿಂದಾಗಿ ನಿಜವಾದ ಪ್ರತಿಭೆ ಇದ್ದವರು ಜಿಗುಪ್ಪೆಗೊಂಡು ಆತ್ಮಹತ್ಯೆಯ ದಾರಿ ಹಿಡಿಯುಂತಾಗಿರುವುದು ದುರಂತವೇ ಸರಿ ಎಂದು ಅವರು ಹೇಳಿಕೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ನ್ಯಾಯದ ಸಾಧನವಾದ ಮೀಸಲಾತಿಯನ್ನು ಪ್ರಭಾವಿ ವರ್ಗದವರು ತಮ್ಮ ಮಕ್ಕಳಿಗಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದು ನಿಜವಾಗಿಯೂ ಶೋಷಿತರಿಗೆ ಸಿಗಬೇಕಾದ ಅವಕಾಶವನ್ನು ಕಸಿದುಕೊಳ್ಳುವ ಕೆಲಸವಾಗಿದೆ. ಲಕ್ಷಾಂತರ ನಿರುದ್ಯೋಗಿ ಯುವಕರು ವರ್ಷಗಟ್ಟಲೆ ಓದಿ, ಕಷ್ಟಪಟ್ಟು ಪರೀಕ್ಷೆ ಬರೆಯುತ್ತಾರೆ. ಆದರೆ ಅಧಿಕಾರವಿರುವವರು ಈ ರೀತಿಯ ಅಡ್ಡಮಾರ್ಗ ಹಿಡಿಯುವುದು ಸಮಾನ ಅವಕಾಶದ ತತ್ವಗಳಿಗೆ ಮಾಡಿದ ಅವಮಾನವಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರಿ ಹುದ್ದೆಗಳನ್ನು ಸಾರ್ವಜನಿಕ ಸೇವೆಯ ಸಾಧನವಾಗಿ ನೋಡುವ ಬದಲು, ಅಧಿಕಾರವರ್ಗವು ಅದನ್ನು ತಮ್ಮ ಕುಟುಂಬದ ಆಸ್ತಿಯಂತೆ ಪರಿಗಣಿಸುತ್ತಿದೆ. ೪೦ ಲಕ್ಷ ಆದಾಯವಿದ್ದರೂ ೪೦ ಸಾವಿರ ಎಂದು ಸುಳ್ಳು ಹೇಳಿ ಮೀಸಲಾತಿ ಕಸಿದುಕೊಳ್ಳುವ ಪ್ರಯತ್ನವು, ಸವಲತ್ತು ಇರುವವರು ಇನ್ನಷ್ಟು ಸವಲತ್ತು ಕಸಿದುಕೊಳ್ಳುವ ಬಂಡವಾಳಶಾಹಿ ವರ್ಗದ ಮನಸ್ಥಿತಿಗೆ ಸಾಕ್ಷಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಆದ್ದರಿಂದ ಸರ್ಕಾರವು ಈ ಕೂಡಲೇ ಕೆಪಿಎಸ್ಸಿಯಲ್ಲಿನ ಭ್ರಷ್ಟರನ್ನು ತೊಲಗಿಸಬೇಕು. ಪಿ. ಸಿ. ಹೋಟಾ ಸಮಿತಿಯ ಶಿಪಾರಸ್ಸುಗಳನ್ನು ಜಾರಿಗೊಳಿಸಬೇಕು ಎಂದು ಎಐಡಿವೈಒ ಆಗ್ರಹಿಸುತ್ತದೆ. ಈ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ ಉದ್ಯೋಗಾಕಾಂಕ್ಷಿಗಳು ಒಗ್ಗಟ್ಟಿನ ಹೋರಾಟಕ್ಕೆ ಸಜ್ಜಾಗಬೇಕೆಂದು ಅವರು ಕರೆ ನೀಡಿದ್ದಾರೆ.



