ಸಾಂಸ್ಕೃತಿಕ

ಆಗಸ್ಟ್ 1ರಿಂದ ಕಲಬುರಗಿಯಲ್ಲಿ ಜಲಜಾಕ್ಷಿ ಕುಲಕರ್ಣಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಆಗಸ್ಟ್ 1ರಿಂದ 3ರವರೆಗೆ ಅಂಕುರ್ ಕಲಾ ಗ್ಯಾಲರಿಯಲ್ಲಿ ಕಲಾಕೃತಿಗಳ ಅನಾವರಣ – ಪರಿಸರ ಹಾಗೂ ಮಹಿಳಾ ಸಂವೇದನೆ ಬಿಂಬಿಸುವ ಚಿತ್ರಗಳ ಪ್ರದರ್ಶನ

ಕಲಬುರಗಿ, ಜು.30: ನಗರದ ದಿ ಇಂಟಿಗ್ರೇಶನ್ ಚಿತ್ರಕಲಾ ಮಹಾವಿದ್ಯಾಲಯದ ಅಂಕುರ್ ಕಲಾ ಗ್ಯಾಲರಿಯಲ್ಲಿ ಆಗಸ್ಟ್ 1ರಿಂದ 3ರವರೆಗೆ ಯುವ ಚಿತ್ರಕಲಾವಿದೆ ಜಲಜಾಕ್ಷಿ ಪಿ. ಕುಲಕರ್ಣಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಆಯೋಜಿಸಲಾಗಿದೆ ಎಂದು ಕಲಾವಿದ ಡಾ. ಪರಶುರಾಮ್ ಪಿ. ತಿಳಿಸಿದ್ದಾರೆ.

ಆಗಸ್ಟ್ 1ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಅಪರ ಆಯುಕ್ತರ ಕಚೇರಿಯ ನಿವೃತ್ತ ಚಿತ್ರಕಲಾ ವಿಷಯ ಪರಿವೀಕ್ಷಕ ಶಿವಾನಂದ ಕೊಪ್ಪದ್ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಚಿತ್ರಕಲಾವಿದರಾದ ಬಾಬುರಾವ್ ಹೆಚ್. ಹಾಗೂ ವೀರೇಂದ್ರ ಶಾಹ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ದಿ ಇಂಟಿಗ್ರೇಶನ್ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಚ್. ಬೆಳಮಗಿ ಅಧ್ಯಕ್ಷತೆ ವಹಿಸಲಿದ್ದಾರೆ.

ಜಲಜಾಕ್ಷಿ ಪಿ. ಕುಲಕರ್ಣಿ ಅವರು ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕರ್ನಾಟಕ ಲಲಿತಕಲಾ ಅಕಾಡೆಮಿಯ 53ನೇ ವಾರ್ಷಿಕ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ನಡೆದ ಸುಮಾರು 15ಕ್ಕೂ ಹೆಚ್ಚು ಏಕವ್ಯಕ್ತಿ ಹಾಗೂ ಸಮೂಹ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ಮೆರೆದಿದ್ದಾರೆ.

ಈ ಪ್ರದರ್ಶನದಲ್ಲಿ ವಿವಿಧ ಮಾಧ್ಯಮಗಳಲ್ಲಿ ರಚಿಸಲಾದ ಸುಮಾರು 15ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಅವರ ಚಿತ್ರಗಳಲ್ಲಿ ಪರಿಸರ ಸಂರಕ್ಷಣೆ, ಪ್ರಕೃತಿ ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಕಲಾತ್ಮಕವಾಗಿ ಬಿಂಬಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button