ದಿಗಾಂವ್ ಮನೆಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರು ಆರೋಪಿಗಳ ಬಂಧನ
ಚಿನ್ನಾಭರಣ, ಮೊಬೈಲ್‌ಗಳು ಸೇರಿದಂತೆ ₹3.15 ಲಕ್ಷ ಮೌಲ್ಯದ ಕಳವು ವಸ್ತುಗಳ ವಶ – ಮೂರು ಪ್ರಕರಣಗಳು ಪತ್ತೆ

ಚಿತ್ತಾಪುರ, ಜು.30: ತಾಲ್ಲೂಕಿನ ದಿಗಾಂವ್ ಗ್ರಾಮದಲ್ಲಿ ಜೂನ್ 25ರಂದು ನಡೆದ ಮನೆಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಸುಮಾರು ₹3.15 ಲಕ್ಷ ಮೌಲ್ಯದ ಕಳವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ದಿಗಾಂವ್ ಗ್ರಾಮದ ಶಿವಬಸಮ್ಮ ಭೀಮರಾಯ ಕರದಳ್ಳಿ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಆರೋಪಿಗಳಾದ ನಾಗರಾಜ್ ಸಾಬಣ್ಣ ಭಜಂತ್ರಿ ಹಾಗೂ ಅಭಿಷೇಕ್ ಅಮೃತ ಮಡಿವಾಳ ಅವರನ್ನು ಬಂಧಿಸಿದ್ದಾರೆ.
ಅಪರ ಪೊಲೀಸ್ ಅಧೀಕ್ಷಕ ಮಹೇಶ್ ಮೇಘಣ್ಣನವರ್, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಹಾಗೂ ಸಿಪಿಐ ಎಸ್.ಬಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಂಜುನಾಥ ರೆಡ್ಡಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಆರೋಪಿಗಳು ದಿಗಾಂವ್ ಗ್ರಾಮದ ಮನೆಯಿಂದ ಮೂರು ಮೊಬೈಲ್‌ಗಳು (ಸುಮಾರು ₹10 ಸಾವಿರ ಮೌಲ್ಯ) ಹಾಗೂ 6 ಗ್ರಾಂ ತೂಕದ ಚಿನ್ನದ ಸರ (ಸುಮಾರು ₹35 ಸಾವಿರ ಮೌಲ್ಯ) ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಇವರ ವಿರುದ್ಧ ದಾಖಲಾಗಿದ್ದ ಇತರೆ ಎರಡು ಕಳವು ಪ್ರಕರಣಗಳನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ.
ಒಂದು ಪ್ರಕರಣದಲ್ಲಿ 75 ಕೆ.ಜಿ. ತೂಕದ 9 ತೊಗರಿ ಚೀಲಗಳು (₹47,700 ಮೌಲ್ಯ) ಮತ್ತು ಮತ್ತೊಂದು ಪ್ರಕರಣದಲ್ಲಿ 3 ಎಚ್‌ಪಿ ನೀರಿನ ಮೋಟಾರ್ ಪಂಪ್ (₹20 ಸಾವಿರ ಮೌಲ್ಯ) ಹಾಗೂ 6 ಕಬ್ಬಿಣದ ಆಂಗಲ್ ಪೈಪ್‌ಗಳು (₹3 ಸಾವಿರ ಮೌಲ್ಯ) ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
ಆರೋಪಿಗಳಿಂದ ಕಳವು ಮಾಡಿದ ಎಲ್ಲ ವಸ್ತುಗಳ ಜೊತೆಗೆ ಕೃತ್ಯಕ್ಕೆ ಬಳಸಿದ್ದ ಬಜಾಜ್ ಪಲ್ಸರ್ ಎನ್‌ಎಸ್ 200 ಬೈಕ್‌ನ್ನೂ ವಶಪಡಿಸಿಕೊಳ್ಳಲಾಗಿದೆ. ಒಟ್ಟು ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ₹3,15,700 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಯಶಸ್ವಿ ತನಿಖೆ ನಡೆಸಿದ ಪೊಲೀಸ್ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿದ್ದಾರೆ.



