ದರೋಡೆ ಯತ್ನ ವಿಫಲ; ಯುವಕನ ಮೇಲೆ ಚಾಕು ದಾಳಿ
ಬ್ಯಾಗ್ ಕಸಿಯಲು ಯತ್ನಿಸಿದ ದುಷ್ಕರ್ಮಿಗಳಿಂದ ಹಲ್ಲೆ; ಗಂಭೀರ ಗಾಯಗೊಂಡ ಯುವಕ ಆಸ್ಪತ್ರೆಗೆ ದಾಖಲು

ಕಲಬುರಗಿ, ಜು.29: ನಗರದ ಕಮಲನಗರ ವ್ಯಾಪ್ತಿಯ ತಾಜ್ ಸುಲ್ತಾನಪುರ ದ್ವಾರದ ಸಮೀಪ ಮಂಗಳವಾರ ರಾತ್ರಿ ದರೋಡೆ ಯತ್ನ ನಡೆಸಿದ ದುಷ್ಕರ್ಮಿಗಳು ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ.
ಗಾಯಗೊಂಡ ಯುವಕನನ್ನು ಶ್ರೀಧರ್ (20) ಎಂದು ಗುರುತಿಸಲಾಗಿದೆ.
ಮಂಗಳವಾರ ರಾತ್ರಿ ಸುಮಾರು 8.30 ಗಂಟೆ ವೇಳೆಗೆ ಶ್ರೀಧರ್ ತನ್ನ ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ರೈಲು ನಿಲ್ದಾಣದ ಕಡೆಗೆ ತೆರಳುತ್ತಿದ್ದಾಗ, ದಾರಿಯಲ್ಲಿ ಅಡ್ಡಗಟ್ಟಿದ ಮೂವರು ದುಷ್ಕರ್ಮಿಗಳು ಅವರ ಬಳಿ ಇದ್ದ ಬ್ಯಾಗ್ ಹಾಗೂ ಹಣವನ್ನು ನೀಡುವಂತೆ ಬೆದರಿಕೆ ಹಾಕಿದ್ದಾರೆ.
ಈ ವೇಳೆ ಶ್ರೀಧರ್ ಪ್ರತಿರೋಧ ವ್ಯಕ್ತಪಡಿಸಿದಾಗ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಲ್ಲಿ ಶ್ರೀಧರ್ ಅವರ ಕೈಗೆ ಗಂಭೀರ ಗಾಯವಾಗಿದ್ದು, ಒಂದು ಬೆರಳಿಗೆ ತೀವ್ರ ಪೆಟ್ಟಾಗಿದೆ ಎಂದು ತಿಳಿದುಬಂದಿದೆ. ಹಲ್ಲೆಯ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಗಾಯಗೊಂಡ ಶ್ರೀಧರ್ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ವಿವಿಧ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದಾರೆ.



