ಮೋಡ ಬಿತ್ತನೆಗೆ ಆಗ್ರಹಿಸಿ ಕಲಬುರಗಿಯಲ್ಲಿ ಆರ್‌ಪಿಐ ಧರಣಿ
ಬರಪೀಡಿತ ಜಿಲ್ಲೆ ಘೋಷಣೆ, ಮೋಡ ಬಿತ್ತನೆ, ರೈತರ ಸಾಲ ಮನ್ನಾ ಹಾಗೂ ತುರ್ತು ಪರಿಹಾರ ಕಾಮಗಾರಿಗಳಿಗೆ ಸರ್ಕಾರ ಕ್ರಮ ಕೈಗೊಳ್ಳುವಂತೆ ಒತ್ತಾಯ.

ಕಲಬುರಗಿ, ಜು.27: ಜಿಲ್ಲೆಯಾದ್ಯಂತ ಮುಂಗಾರು ಮಳೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಬರದ ಛಾಯೆ ಆವರಿಸಿರುವುದರಿಂದ ತಕ್ಷಣ ಮೋಡ ಬಿತ್ತನೆ ನಡೆಸಿ, ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಜಿಲ್ಲಾ ಘಟಕದ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿದರು.
ದಕ್ಷಿಣ ಭಾರತ ಕಾರ್ಯದರ್ಶಿ ಎ.ಬಿ. ಹೊಸಮನಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷ ಮಿಲಿಂದ್ ಕನಮಸ್, ಸತೀಶ್ ಮಾಳೆ, ಹುಸೇನ್‌ಬಾಬಾ, ದಿನೇಶ್ ಉರಾಡಕರ್, ಭೀಮಾಶಂಕರ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಮುಂಗಾರು ಮಳೆ ವಿಫಲವಾಗಿರುವುದರಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆಗಳು ಒಣಗುತ್ತಿವೆ. ಜೋಳ, ಹತ್ತಿ, ಕಬ್ಬು, ತೊಗರಿ ಸೇರಿದಂತೆ ವಿವಿಧ ಬೆಳೆಗಳಿಗೆ ಭಾರೀ ಹಾನಿಯಾಗಿದ್ದು, ಕುಡಿಯುವ ನೀರಿನ ಸಮಸ್ಯೆಯೂ ಗಂಭೀರವಾಗಿದೆ ಎಂದು ತಿಳಿಸಿದರು.
ಬ್ಯಾಂಕ್‌ಗಳ ಸಾಲದ ಒತ್ತಡದಿಂದ ರೈತರು ಆತ್ಮಹತ್ಯೆಗೆ ಮುಂದಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಕೂಡಲೇ ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಹಾಗೂ ರಾಷ್ಟ್ರೀಯ ಬ್ಯಾಂಕ್‌ಗಳ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿ ಎಕರೆಗೆ ₹50 ಸಾವಿರ ಬೆಳೆ ಪರಿಹಾರ ನೀಡಬೇಕು. ಜಾನುವಾರುಗಳ ರಕ್ಷಣೆಗೆ ಗೋಶಾಲೆಗಳನ್ನು ಆರಂಭಿಸಿ, ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು. ಮಹಾರಾಷ್ಟ್ರದಿಂದ ಭೀಮಾ ನದಿಯ ಮೂಲಕ 15 ಟಿಎಂಸಿ ನೀರು ಹರಿಸುವ ಕ್ರಮ ಕೈಗೊಳ್ಳಬೇಕು. ರೈತರಿಗೆ ಉಚಿತ ಬೀಜ ಮತ್ತು ರಸಗೊಬ್ಬರ ವಿತರಿಸಬೇಕು. ಬಾಕಿ ಉಳಿದಿರುವ ಬೆಳೆ ವಿಮೆ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ತಮ್ಮ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಆರ್‌ಪಿಐ ಮುಖಂಡರು ಎಚ್ಚರಿಕೆ ನೀಡಿದರು.



