ರಾಜ್ಯ

ಕಲಬುರಗಿ ಬಂದ್‌ಗೆ ಕರೆ: ಸೇಡಂ ರಿಂಗ್ ರಸ್ತೆಯಲ್ಲಿ ರೈತರ ರಸ್ತೆ ತಡೆ ಪ್ರತಿಭಟನೆ

ಬರಪೀಡಿತ ಪ್ರದೇಶ ಘೋಷಣೆ, ಪರಿಹಾರ, ಬೆಳೆಸಾಲ ಮನ್ನಾ ಸೇರಿ ವಿವಿಧ ಬೇಡಿಕೆಗಳಿಗೆ ಆಗಸ್ಟ್ 17ರಂದು ಕಲಬುರಗಿ ಬಂದ್‌ಗೆ ಕರೆ

ಕಲಬುರಗಿ, ಜು.29: ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಆಗಸ್ಟ್ 17ರಂದು ಕಲಬುರಗಿ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬುಧವಾರ ನಗರದ ಸೇಡಂ ರಿಂಗ್ ರಸ್ತೆಯಲ್ಲಿ ವಿವಿಧ ರೈತ ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭೀಮಾಶಂಕರ ಮಾಡ್ಯಾಳ, ಸಿದ್ದಣ್ಣ ಅಣಕಲ್, ಅಲ್ಲಾವುದ್ದೀನ್ ನೀಲೂರು, ಮಹಿಬೂಬ್ ಪಟೇಲ್, ಉಮಾಪತಿ ಪಾಟೀಲ, ಸಿದ್ದಣ್ಣ ಕಣ್ಣೂರು, ಶರಣಬಸಪ್ಪ ಗಂಜಲಖೇಡ್, ಸಿದ್ದು ಎಸ್.ಎಲ್., ಕರೆಪ್ಪ ಕರಗೊಂಡ, ಆದಿತ್ಯ ಶಹಾಪುರ, ಭೀಮಶ್ಯಾ ಬಡದಾಳ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರತಿಭಟನಾಕಾರರು ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು, ಹಿಂಗಾರು ಬಿತ್ತನೆಗೆ ಉಚಿತ ಬೀಜ ಮತ್ತು ರಸಗೊಬ್ಬರ ವಿತರಿಸಬೇಕು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ಮರುಪಾವತಿಗೆ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಕರ್ನಾಟಕದ ಪಾಲಿನ 15 ಟಿಎಂಸಿ ನೀರನ್ನು ಬಿಡುಗಡೆ ಮಾಡಿ ಭೀಮಾ ನದಿಗೆ ಹರಿಸಬೇಕು. ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ರೈತರನ್ನು ರಕ್ಷಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬರದ ಪರಿಣಾಮ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗದ ಕೊರತೆ ಉಂಟಾಗಿ ಜನರು ನಗರಗಳಿಗೆ ವಲಸೆ ಹೋಗುತ್ತಿರುವುದರಿಂದ ಸರ್ಕಾರ ಕೂಡಲೇ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು. ಪ್ರತಿ ಎಕರೆಗೆ ₹30 ಸಾವಿರ ಪರಿಹಾರ ನೀಡಬೇಕು ಹಾಗೂ ರೈತರ ಬೆಳೆಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಮುಂಗಾರು ವೈಫಲ್ಯದಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಬೆಳೆ ವಿಮೆ ಪರಿಹಾರವನ್ನು ಶೀಘ್ರ ಬಿಡುಗಡೆ ಮಾಡಬೇಕು. ಒಣಗಿದ ಕಬ್ಬಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಮರ್ಪಕ ಪರಿಹಾರ, ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಬಾಕಿ ಇರುವ ಬೆಳೆ ವಿಮೆ ಹಣ ಹಾಗೂ ಬೆಳೆ ಕಟಾವು ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಆಗ್ರಹಿಸಿದರು.

Related Articles

Leave a Reply

Your email address will not be published. Required fields are marked *

Back to top button