ರಾಜ್ಯ

ಬೀದರ್‌ನಲ್ಲಿ ಬೃಹತ್ ಜಾಗೃತಿ ಶೋಭಾಯಾತ್ರೆ: ಗೋಮಾತೆಗೆ ‘ರಾಷ್ಟ್ರಮಾತೆ’ ಸ್ಥಾನಮಾನಕ್ಕೆ ಆಗ್ರಹ

3 ಲಕ್ಷ ಸಹಿ ಸಂಗ್ರಹ ಅಭಿಯಾನಕ್ಕೆ ಬೆಂಬಲ – ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ರಾಷ್ಟ್ರವ್ಯಾಪಿ ಹೋರಾಟದ ಘೋಷಣೆ

ಬೀದರ್, ಜು.27: ಗೋಮಾತೆಗೆ “ರಾಷ್ಟ್ರಮಾತೆ” ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ, ಗೋಮಾತೆ ಗೌರವ ಅಭಿಯಾನದ ವತಿಯಿಂದ ಸೋಮವಾರ ಬೀದರ್ ನಗರದಲ್ಲಿ ಬೃಹತ್ ಜಾಗೃತಿ ಶೋಭಾಯಾತ್ರೆ ಹಾಗೂ ಮನವಿ ಸಲ್ಲಿಕೆ ಕಾರ್ಯಕ್ರಮ ನಡೆಯಿತು.

ನಗರದ ಕೇಂದ್ರ ಬಸ್ ನಿಲ್ದಾಣದ ಸಮೀಪದ ದೇವಿ ಕಾಲೋನಿಯ ದೇವಿ ದೇವಸ್ಥಾನದಿಂದ ಬೆಳಿಗ್ಗೆ 11 ಗಂಟೆಗೆ ಆರಂಭವಾದ ಶೋಭಾಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು. ಈ ವೇಳೆ ಗೋಭಕ್ತರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳಿಗೆ ಅಧಿಕೃತ ಮನವಿ ಪತ್ರ ಸಲ್ಲಿಸಲಾಯಿತು. ಜೊತೆಗೆ ಅಭಿಯಾನದ ಉದ್ದೇಶ ಹಾಗೂ ಮಾಹಿತಿಯನ್ನು ಒಳಗೊಂಡ ಪೆನ್‌ಡ್ರೈವ್‌ನ್ನೂ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ಅಭಿಯಾನದ ಅಂಗವಾಗಿ ದೇಶಾದ್ಯಂತ 3 ಲಕ್ಷಕ್ಕೂ ಅಧಿಕ ಸಹಿಗಳನ್ನು ಸಂಗ್ರಹಿಸಿ, ಗೋಮಾತೆಗೆ “ರಾಷ್ಟ್ರಮಾತೆ” ಸ್ಥಾನಮಾನ ಘೋಷಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಈಶ್ವರಸಿಂಗ್ ಠಾಕೂರ್ ತಿಳಿಸಿದರು. ಗೋಮಾತೆ ಭಾರತೀಯ ಸಂಸ್ಕೃತಿ, ಸನಾತನ ಧರ್ಮ ಮತ್ತು ದೇಶದ ನಂಬಿಕೆಯ ಪ್ರತೀಕವಾಗಿದ್ದು, ರಾಷ್ಟ್ರಮಾತೆ ಸ್ಥಾನಮಾನ ನೀಡುವುದು ಭಾರತೀಯ ಸಂಸ್ಕೃತಿಗೆ ಸಲ್ಲುವ ಗೌರವವಾಗಲಿದೆ ಎಂದು ಅವರು ಹೇಳಿದರು.

ಅಭಿಯಾನದ ಜಿಲ್ಲಾ ಅಧ್ಯಕ್ಷ ವೆಂಕಟೇಶ್ ಶಾಲಿ ಚಿದ್ರಿ ಮಾತನಾಡಿ, ಈ ಅಭಿಯಾನ ಜಿಲ್ಲೆಗೆ ಮಾತ್ರ ಸೀಮಿತವಾಗದೆ ರಾಷ್ಟ್ರವ್ಯಾಪಿಯಾಗಿ ನಡೆಯುತ್ತಿದೆ. ಆಗಸ್ಟ್ 27ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗುವುದು. ಬಳಿಕ ಸೆಪ್ಟೆಂಬರ್ 27ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು. ಅಗತ್ಯವಿದ್ದರೆ ನವದೆಹಲಿಯಲ್ಲಿ ಬೃಹತ್ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಗೋಮಾತೆಗೆ ರಾಷ್ಟ್ರಮಾತೆ ಸ್ಥಾನಮಾನ ದೊರೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಿ.ಬಿ. ರೆಡ್ಡಿ, ಶ್ರೀಕಾಂತ್ ಮೋದಿ, ಸಂದೀಪ್ ಪಾಟೀಲ್, ಮಲ್ಲಿಕಾರ್ಜುನ ನಂದಗೋಕರ್, ರಾಜಕುಮಾರ್ ಆರ್ಯ, ಧನರಾಜ್ ಪಾಂಡ್ರೆ, ರತಿನ್ ಕಮಲ್, ಮಾಣಿಕ್ ಮನಾಖೇಳಿ, ಓಂಪ್ರಕಾಶ್ ಆರ್ಯ, ನರಸಿಂಗ್ ರಾವ್, ಗೋಪಿಕೃಷ್ಣ, ವಸಂತ ಮಾಲೇಗಾಂವ್, ಬಾಬು ಮೇತ್ರೆ, ಶಿವಾನಂದ ಮಾಳೇಗಾಂವ್, ಅಮರ್ ಸಿಂಗ್ ಠಾಕೂರ್, ದತ್ತು ಹಾಲಕೋಡೆ ಸೇರಿದಂತೆ ಹಲವಾರು ಗೋಭಕ್ತರು, ಸಾರ್ವಜನಿಕರು ಹಾಗೂ ಧರ್ಮಪ್ರೇಮಿಗಳು ಭಾಗವಹಿಸಿ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button