ಭೀಮಾ ನದಿಗೆ 61,600 ಕ್ಯೂಸೆಕ್ ನೀರು ಬಿಡುಗಡೆ: ನದಿ ಪಾತ್ರದ ನಿವಾಸಿಗಳಿಗೆ ಎಚ್ಚರಿಕೆ
ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ನೀರಿನ ಹರಿವು ಹೆಚ್ಚಳ; ತಗ್ಗು ಪ್ರದೇಶದ ಜನರು ಹಾಗೂ ರೈತರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳ ಸೂಚನೆ

ಅಫಜಲಪುರ, ಜು.28: ಮಹಾರಾಷ್ಟ್ರ ರಾಜ್ಯದ ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 61,600 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಈ ನೀರು ತಾಲೂಕಿನ ಭೀಮಾ ನದಿಯ ಸೊನ್ನ ಬ್ಯಾರೇಜ್ ಪ್ರದೇಶಕ್ಕೆ ತಲುಪಲಿದ್ದು, ನದಿ ತೀರದ ಗ್ರಾಮಗಳ ನಿವಾಸಿಗಳು ಮುನ್ನೆಚ್ಚರಿಕೆ ವಹಿಸುವಂತೆ ತಾಲೂಕು ಆಡಳಿತ ಸೂಚಿಸಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚುವ ಸಾಧ್ಯತೆ ಇರುವುದರಿಂದ ಉಜ್ಜನಿ ಜಲಾಶಯಕ್ಕೆ ಹೆಚ್ಚಿನ ಒಳಹರಿವು ಬರಬಹುದು. ಅದರ ಪರಿಣಾಮವಾಗಿ ಯಾವುದೇ ಸಮಯದಲ್ಲಿ ಇನ್ನಷ್ಟು ನೀರನ್ನು ಭೀಮಾ ನದಿಗೆ ಹರಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನದಿ ತೀರ, ಹಳ್ಳ, ಕೆರೆ ಹಾಗೂ ಜಲಾಶಯಗಳ ಸಮೀಪ ಅನಗತ್ಯವಾಗಿ ತೆರಳಬಾರದು. ನದಿಯಲ್ಲಿ ಬಟ್ಟೆ ತೊಳೆಯುವುದು, ಜಾನುವಾರುಗಳನ್ನು ನೀರಿಗೆ ಇಳಿಸುವುದು, ಅಪಾಯದ ಸೇತುವೆಗಳ ಮೇಲೆ ಸಂಚರಿಸುವುದು ಹಾಗೂ ನದಿಯಲ್ಲಿ ಈಜುವುದು ಸೇರಿದಂತೆ ಅಪಾಯಕಾರಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಪ್ಪಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
ನದಿ ತೀರದಲ್ಲಿರುವ ದೇವಸ್ಥಾನಗಳು, ಮಸೀದಿಗಳು, ಚರ್ಚುಗಳು ಸೇರಿದಂತೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವವರು ಹಾಗೂ ಪ್ರವಾಸಿಗರು ವಿಶೇಷ ಎಚ್ಚರಿಕೆ ವಹಿಸಬೇಕು. ನದಿ ಪಾತ್ರದ ಪ್ರವಾಸಿ ತಾಣಗಳಲ್ಲಿ ಫೋಟೋ ಹಾಗೂ ಸೆಲ್ಫಿ ತೆಗೆಯುವ ವೇಳೆ ಯಾವುದೇ ಅಪಾಯಕ್ಕೆ ಒಳಗಾಗದಂತೆ ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.
ಗ್ರಾಮ ಪಂಚಾಯಿತಿಗಳ ಮೂಲಕ ಪ್ರತಿ ಗ್ರಾಮದಲ್ಲೂ ಡಂಗೂರ ಸಾರಿಸಿ ಸಾರ್ವಜನಿಕರಿಗೆ ಪ್ರವಾಹ ಮುನ್ನೆಚ್ಚರಿಕೆ ಬಗ್ಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಮೀನುಗಾರರು ನದಿಗೆ ಇಳಿಯದಂತೆ ಹಾಗೂ ರೈತರು ಜಾನುವಾರುಗಳನ್ನು ನದಿ ತೀರಕ್ಕೆ ಕರೆತರದಂತೆ ಎಚ್ಚರಿಕೆ ನೀಡಲಾಗಿದೆ.
ತಗ್ಗು ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳು ಹಾಗೂ ಭೀಮಾ ನದಿ ಪಾತ್ರದ ಜನರು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸುರಕ್ಷಿತ ಸ್ಥಳಗಳಲ್ಲಿ ಇರಬೇಕು. ಅಗತ್ಯವಿದ್ದಲ್ಲಿ ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸಿ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.



