ಕಲಬುರಗಿಯಲ್ಲಿ ಜುಲೈ 19ರಂದು ‘ಶರ್ಮಿಷ್ಠೆ’ ನಾಟಕ ಪ್ರದರ್ಶನ; 18 ಸಾಧಕರಿಗೆ ಕುಮಾರಶ್ರೀ ಪ್ರಶಸ್ತಿ ಪ್ರದಾನ
ರಂಗಸಂಪದ ಬೆಂಗಳೂರು ತಂಡದಿಂದ ನಾಟಕ ಪ್ರದರ್ಶನ – ಹಿರಿಯ ನಟಿ ಉಮಾಶ್ರೀ ಸೇರಿದಂತೆ ಗಣ್ಯರ ಉಪಸ್ಥಿತಿ

ಕಲಬುರಗಿ, ಜು. 11: ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜುಲೈ 19ರಂದು ಮಧ್ಯಾಹ್ನ 3 ಗಂಟೆಗೆ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ, ಹಾನಗಲ್‌ನ 44ನೇ ವಾರ್ಷಿಕೋತ್ಸವದ ಅಂಗವಾಗಿ ರಂಗಸಂಪದ ಬೆಂಗಳೂರು ತಂಡದಿಂದ ‘ಶರ್ಮಿಷ್ಠೆ’ ನಾಟಕ ಪ್ರದರ್ಶನ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 18 ಗಣ್ಯರಿಗೆ ‘ಕುಮಾರಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ ಎಂದು ಸಂಘದ ಮಾಲೀಕ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ್ ಮಾಸ್ತರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಲಿದ್ದು, ಹರಕೂಡದ ಡಾ. ಚನ್ನವೀರ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ರಮೇಶ್ ಜಿ. ತಿಪ್ಪನೂರು, ಕರ್ನಾಟಕ ಲೋಕಾಯುಕ್ತ ಡಿಎಸ್ಪಿ ಬಸವರಾಜ ಯಲಿಗಾರ್, ನ್ಯಾಯವಾದಿ ಮಲ್ಲಿಕಾರ್ಜುನ ಮೇಳಕುಂದಿ, ಡಾ. ಬಿ.ಎಸ್. ದೇಸಾಯಿ, ಉದ್ಯಮಿ ರಮೇಶ್ ಜೇವರ್ಗಿ, ಚನ್ನಬಸಪ್ಪ ಸಮಾಣಿ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ವೇಳೆ ಕುಮಾರ ಸಮೀರ್ ಬಿ. ಶೇಖ್, ತನ್ವೀರ್ ಬಿ. ಶೇಖ್ ಹಾಗೂ ಬಸವರಾಜ ಚ. ಹೂಗಾರ ಅವರಿಂದ ಗಾಯನ ಕಾರ್ಯಕ್ರಮವೂ ನಡೆಯಲಿದೆ.
ಹಿರಿಯ ರಂಗಭೂಮಿ ಹಾಗೂ ಚಲನಚಿತ್ರ ನಟಿ ಉಮಾಶ್ರೀ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 18 ಗಣ್ಯರಿಗೆ ಕುಮಾರಶ್ರೀ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಪುರಸ್ಕೃತರಲ್ಲಿ ಅಂಬುಜಮ್ಮ ಆರ್., ಶಾರದಾ ಬಿ. ಪಾಟೀಲ್, ಜ್ಯೋತಿ ಸಂಗನಾಳ, ಸ್ವಪ್ನ ವಿಜಯಪುರ, ಅಶೋಕ್ ಸಿಂಗೆ, ಭೀಮಾಶಂಕರ ಪ್ರಚಂಡೆ, ಪ್ರೇಮಾ ಆರ್. ತಾಳಿಕೋಟೆ, ಮಲ್ಲಪ್ಪ ಬಿ. ದಂಡಿನ್, ನಿಜಗುಣಿ ಆರ್., ದತ್ತರಾಜ ಕಲಶೆಟ್ಟಿ, ಸಂದೀಪ್ ಬಿ. ಮಳಗಿ, ಸಿದ್ದರಾಮ ಶರಣಪ್ಪ ಕಿರಣಳ್ಳಿ, ಗಿರಿಮಲ್ಲಪ್ಪ ಭಂಟನಳ್ಳಿ, ಶಿವಯ್ಯಸ್ವಾಮಿ ಬಿಬ್ಬಳ್ಳಿ, ಮಹಿಪಾಲರೆಡ್ಡಿ ಮುನ್ನೂರು, ನಾರಾಯಣರಾವ ಕುಲಕರ್ಣಿ, ಸೂರ್ಯಕಾಂತ್ ಹಂಗನಳ್ಳಿ ಹಾಗೂ ಇತರರು ಸೇರಿದ್ದಾರೆ.
1983ರಲ್ಲಿ ಮಹಾರಾಷ್ಟ್ರದ ಜತ್ ತಾಲ್ಲೂಕಿನ ಉಮದಿ ಗ್ರಾಮದಲ್ಲಿ ಆರಂಭವಾದ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘವು ಸಾಮಾಜಿಕ, ಐತಿಹಾಸಿಕ, ಪೌರಾಣಿಕ ಹಾಗೂ ಧಾರ್ಮಿಕ ನಾಟಕಗಳನ್ನು ರಾಜ್ಯದಾದ್ಯಂತ ಪ್ರದರ್ಶಿಸುತ್ತಾ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯಶಸ್ವಿಯಾಗಿ ಸೇವೆ ಸಲ್ಲಿಸಿದೆ ಎಂದು ಎಲ್.ಬಿ. ಶೇಖ್ ಮಾಸ್ತರ್ ಹೇಳಿದರು.
2003ರಿಂದ ಕಲಬುರಗಿಯಲ್ಲಿ ನಿರಂತರವಾಗಿ ನಾಟಕ ಪ್ರದರ್ಶನಗಳನ್ನು ಆಯೋಜಿಸುತ್ತಿರುವ ಸಂಘವು, 24ಕ್ಕೂ ಹೆಚ್ಚು ನಾಟಕಗಳ ಸುಮಾರು 9 ಸಾವಿರಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿ ರಂಗಭೂಮಿ ಕ್ಷೇತ್ರದಲ್ಲಿ ವಿಶಿಷ್ಟ ದಾಖಲೆ ನಿರ್ಮಿಸಿದೆ ಎಂದು ಅವರು ತಿಳಿಸಿದರು.
ನಾಟಕ ಪ್ರದರ್ಶನಕ್ಕೆ ಉಚಿತ ಪ್ರವೇಶ ಇರುವುದಿಲ್ಲ. ₹200ರಿಂದ ₹300ರವರೆಗೆ ಟಿಕೆಟ್ ದರ ನಿಗದಿಪಡಿಸಲಾಗಿದ್ದು, ರಂಗಭೂಮಿ ಉಳಿಸಿ ಬೆಳೆಸುವ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿ ನಾಟಕ ವೀಕ್ಷಿಸುವಂತೆ ಅವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಹಾಗೂ ಸಾಹಿತಿ ಬಿ.ಎಚ್. ನಿರಗುಡಿ ಮತ್ತು ನಾಟ್ಯ ಸಂಘದ ಸಂಚಾಲಕ ಶ್ರೀಧರ್ ಹೆಗಡೆ ಉಪಸ್ಥಿತರಿದ್ದರು.



