ಮೂವತ್ತರೊಳಗಿನ ಯುವ ಉದ್ಯಮಿಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನ; ೨೧ ಸಂಸ್ಥಾಪಕರಿಗೆ ಸ್ಥಾನ
ಕಳೆದ ವರ್ಷಕ್ಕಿಂತ ಮೂರು ಪಟ್ಟು ಏರಿಕೆ; ದೇಶದ ನವೋದ್ಯಮ ಕ್ಷೇತ್ರದಲ್ಲಿ ಬೆಂಗಳೂರಿನ ಪ್ರಾಬಲ್ಯ ಮತ್ತಷ್ಟು ಬಲಿಷ್ಠ ಎಂದ ಪ್ರಿಯಾಂಕ್ ಖರ್ಗೆ

ದೇಶದ ನವೋದ್ಯಮ ಕ್ಷೇತ್ರದಲ್ಲಿ ಬೆಂಗಳೂರು ತನ್ನ ಅಗ್ರಸ್ಥಾನವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ೨೦೨೬ನೇ ಸಾಲಿನ ಮೂವತ್ತರೊಳಗಿನ ಯುವ ಉದ್ಯಮಿಗಳ ಪಟ್ಟಿಯಲ್ಲಿ ಬೆಂಗಳೂರಿನ ೨೧ ಮಂದಿ ಯುವ ಸಂಸ್ಥಾಪಕರು ಸ್ಥಾನ ಪಡೆದಿದ್ದು, ಕಳೆದ ವರ್ಷದ ಕೇವಲ ೭ ಮಂದಿಯಿಂದ ಈ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಕರ್ನಾಟಕ ಸರ್ಕಾರದ ಸಚಿವ ಪ್ರಿಯಾಂಕ್ ಖರ್ಗೆ, ಭಾರತದ ನವೋದ್ಯಮ ಪರಿಸರ ವ್ಯವಸ್ಥೆ ವೇಗವಾಗಿ ಬೆಳೆಯುತ್ತಿದ್ದು, ಯುವ ಪ್ರತಿಭೆಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮ ಕ್ಷೇತ್ರಕ್ಕೆ ಕಾಲಿಡುತ್ತಿರುವುದು ಸಂತಸದ ಬೆಳವಣಿಗೆ ಎಂದು ಹೇಳಿದ್ದಾರೆ.
ದೇಶದ ನವೋದ್ಯಮ ಕ್ಷೇತ್ರವು ಈಗ ಹೆಚ್ಚು ಯುವಕೇಂದ್ರಿತವಾಗಿದ್ದು, ಆಳವಾದ ತಂತ್ರಜ್ಞಾನ ಹಾಗೂ ಯಂತ್ರಾಂಶ ಆಧಾರಿತ ಹೊಸ ಆವಿಷ್ಕಾರಗಳತ್ತ ಹೆಚ್ಚಿನ ಗಮನ ಹರಿಸುತ್ತಿದೆ. ಈ ಬದಲಾವಣೆಯನ್ನು ೨೦೨೬ರ ಯುವ ಉದ್ಯಮಿಗಳ ಪಟ್ಟಿ ಸ್ಪಷ್ಟವಾಗಿ ಪ್ರತಿಬಿಂಬಿಸುತ್ತಿದ್ದು, ಈ ಕ್ಷೇತ್ರದಲ್ಲಿ ಬೆಂಗಳೂರು ಮುಂಚೂಣಿಯಲ್ಲೇ ಮುಂದುವರಿದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದಿಂದ ದೇಶದ ಭವಿಷ್ಯವನ್ನು ರೂಪಿಸುತ್ತಿರುವ ಎಲ್ಲ ಯುವ ಸಂಸ್ಥಾಪಕರಿಗೂ ಅಭಿನಂದನೆ ಸಲ್ಲಿಸಿರುವ ಸಚಿವರು, ನವೀನ ಆಲೋಚನೆಗಳು ಮತ್ತು ತಂತ್ರಜ್ಞಾನ ಆಧಾರಿತ ಉದ್ಯಮಗಳ ಬೆಳವಣಿಗೆಯಲ್ಲಿ ರಾಜ್ಯವು ದೇಶಕ್ಕೆ ಮಾದರಿಯಾಗಿ ಹೊರಹೊಮ್ಮುತ್ತಿದೆ ಎಂದು ತಿಳಿಸಿದ್ದಾರೆ.
ದೇಶದ ನವೋದ್ಯಮ ರಾಜಧಾನಿ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಬೆಂಗಳೂರು, ಯುವ ಉದ್ಯಮಿಗಳಿಗೆ ಅನುಕೂಲಕರ ವಾತಾವರಣ, ತಂತ್ರಜ್ಞಾನ ಪರಿಣತಿ, ಹೂಡಿಕೆದಾರರ ಬೆಂಬಲ ಹಾಗೂ ಜಾಗತಿಕ ಮಟ್ಟದ ಅವಕಾಶಗಳಿಂದಾಗಿ ಮತ್ತೊಮ್ಮೆ ತನ್ನ ಮುಂಚೂಣಿ ಸ್ಥಾನವನ್ನು ಕಾಯ್ದುಕೊಂಡಿದೆ.

