ಅಜಯಸಿಂಗ್‌ಗೆ ಸಚಿವ ಸ್ಥಾನ ಬೇಡಿಕೆ ವಿರೋಧ: ಕಾಂಗ್ರೆಸ್ ಟಿಕೆಟ್ ಹಂಚಿಕೆ ಕುರಿತು ಹನಮಂತಗೌಡ ಆಕ್ಷೇಪ
ಬಸವಕಲ್ಯಾಣದಲ್ಲಿ ಟಿಕೆಟ್ ಹಂಚಿಕೆ ಸೋಲಿಗೆ ಕಾರಣ ಎಂದ ಸಾಮಾಜಿಕ ಕಾರ್ಯಕರ್ತ; 2028ರಲ್ಲಿ ಬಿ. ಮಾಲಾಗೆ ಅವಕಾಶ ನೀಡುವಂತೆ ಒತ್ತಾಯ

ಕಲಬುರಗಿ, ಜು.14: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿ. ಮಾಲಾ ಅವರಿಗೆ ಟಿಕೆಟ್ ನೀಡದೆ ವಿಜಯಸಿಂಗ್ ಅವರಿಗೆ ಅಭ್ಯರ್ಥಿತ್ವ ನೀಡಿದ್ದರಿಂದ ಪಕ್ಷಕ್ಕೆ ಸೋಲು ಎದುರಾಯಿತು ಎಂದು ಸಾಮಾಜಿಕ ಕಾರ್ಯಕರ್ತ ಮಡಿವಾಳಪ್ಪ ಹನಮಂತಗೌಡ ಆರೋಪಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಅಜಯಸಿಂಗ್ ಅವರಿಗೆ ಈಗಾಗಲೇ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆ ಸಮಂಜಸವಲ್ಲ ಎಂದು ಹೇಳಿದರು.
ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರು ಕಾಂಗ್ರೆಸ್ ನಾಯಕರು ಹಾಗೂ ಶಾಸಕರ ಕುರಿತು ಪದೇ ಪದೇ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ ಹಿರಿಯ ಕಾಂಗ್ರೆಸ್ ಶಾಸಕರು ಸಾಕಷ್ಟು ಇದ್ದು, ಅವರ ಕುರಿತು ಯಾವುದೇ ಮಾತುಗಳಿಲ್ಲದೆ ಕೇವಲ ಅಜಯಸಿಂಗ್ ಅವರ ಸಚಿವ ಸ್ಥಾನವನ್ನೇ ಪ್ರಸ್ತಾಪಿಸುವುದು ಸೂಕ್ತವಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಹಲವು ಹಿರಿಯ ಶಾಸಕರು ಸಚಿವ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಈಗಾಗಲೇ ಅಜಯಸಿಂಗ್ ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದ್ದು, ಇತರ ನಾಯಕರಿಗೂ ಅವಕಾಶ ಕಲ್ಪಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
2028ರ ವಿಧಾನಸಭಾ ಚುನಾವಣೆಯಲ್ಲಿ ಬಸವಕಲ್ಯಾಣ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷವು ಬಿ. ಮಾಲಾ ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ ಅವರು, 2023ರ ಚುನಾವಣೆಯಲ್ಲಿ ಅಭ್ಯರ್ಥಿ ಬದಲಾವಣೆಯೇ ಪಕ್ಷದ ಸೋಲಿಗೆ ಕಾರಣವಾಯಿತು ಎಂದು ಹೇಳಿದರು.
ಬಿ. ಮಾಲಾ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ಯುವ ಕೋಳಿ ಸಮಾಜದ ನೇತೃತ್ವದಲ್ಲಿ ಕಲಬುರಗಿಯಿಂದ ಬಸವಕಲ್ಯಾಣದವರೆಗೆ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗುವುದು ಎಂದು ಹನಮಂತಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪೀರಪ್ಪ ಮುಜಬಾ ಹಾಗೂ ಪಿತಾಂಬರ ಕಲಗುತ್ಕರ್ ಉಪಸ್ಥಿತರಿದ್ದರು.



