ಸೆ.17ರ ವಿಮೋಚನಾ ದಿನದಂದು ಸರ್ಕಾರಿ ರಜೆ ಘೋಷಣೆಗೆ ಆಗ್ರಹ
ಕಲ್ಯಾಣ ಕರ್ನಾಟಕದ ಸಮಗ್ರ ಇತಿಹಾಸವನ್ನು ಪಠ್ಯಕ್ರಮಕ್ಕೆ ಸೇರಿಸಲು ಸೆ.2ರಂದು ಪತ್ರ ಚಳವಳಿ

ಕಲಬುರಗಿ, ಆ.29: ಪ್ರತಿವರ್ಷ ಆಚರಿಸಲಾಗುತ್ತಿರುವ ಸೆಪ್ಟೆಂಬರ್ 17ರ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯಂದು ಸರ್ಕಾರಿ ರಜೆ ಘೋಷಿಸಬೇಕು ಹಾಗೂ ಕಲ್ಯಾಣ ಕರ್ನಾಟಕದ ಸಮಗ್ರ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಬೇಕು ಎಂದು ಆಗ್ರಹಿಸಿ ಸೆಪ್ಟೆಂಬರ್ 2ರಿಂದ ಪತ್ರ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಜೈ ಕನ್ನಡಿಗರ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸಚಿನ್ ಎಸ್. ಫರತಾಬಾದ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡೂ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈಗಾಗಲೇ ಪ್ರತಿಭಟನೆಗಳ ಮೂಲಕ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ಆದರೆ ಇದುವರೆಗೆ ಹೋರಾಟಕ್ಕೆ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅತ್ಯಂತ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಹೊತ್ತಿರುವ ಕಲ್ಯಾಣ ಕರ್ನಾಟಕ ಭಾಗವನ್ನು ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನಿಜಾಮರ ಆಡಳಿತದಿಂದ ಮುಕ್ತಗೊಳಿಸಿ ಭಾರತದ ಒಕ್ಕೂಟಕ್ಕೆ ಸೇರ್ಪಡೆಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಈ ಭಾಗದ ಜನರ ಸ್ವಾತಂತ್ರ್ಯ ಹೋರಾಟ ಹಾಗೂ ವಿಮೋಚನೆಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ ಎಂದು ಸಚಿನ್ ಫರತಾಬಾದ್ ಹೇಳಿದರು.
ದೇಶದ ಉಳಿದ ಭಾಗಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರೆತರೂ, ಹೈದರಾಬಾದ್ ಕರ್ನಾಟಕ ಭಾಗಕ್ಕೆ 1948ರಲ್ಲಿ, ಅಂದರೆ ಒಂದು ವರ್ಷದ ಬಳಿಕ ಸ್ವಾತಂತ್ರ್ಯ ದೊರೆಯಿತು. ಆದರೆ ಹೈದರಾಬಾದ್ ಕರ್ನಾಟಕ ಭಾಗದ ಈ ಐತಿಹಾಸಿಕ ಹಿನ್ನೆಲೆ ಮತ್ತು ವಿಮೋಚನಾ ಹೋರಾಟದ ಸಮಗ್ರ ಇತಿಹಾಸವನ್ನು ಇದುವರೆಗೂ ಯಾವುದೇ ಪಠ್ಯಪುಸ್ತಕದಲ್ಲಿ ಸಮರ್ಪಕವಾಗಿ ಅಳವಡಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸೆಪ್ಟೆಂಬರ್ 17ರಂದು ಸರ್ಕಾರಿ ರಜೆ ಘೋಷಿಸಬೇಕು ಹಾಗೂ ಕಲ್ಯಾಣ ಕರ್ನಾಟಕದ ಸಮಗ್ರ ಇತಿಹಾಸವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರ ತಕ್ಷಣ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಸೆಪ್ಟೆಂಬರ್ 2ರಿಂದ ಪತ್ರ ಚಳವಳಿ ಆರಂಭಿಸಲಾಗುವುದು. ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸುರೇಶ್ ಹನಗೋಡಿ, ಗುಡುಸಿಂಗ್, ಅಣವೀರ ಪಾಟೀಲ, ಪಿಂಟು ಜಮಾದಾರ, ಹುಲಿಕಂಠ, ಮಲ್ಲು, ದರ್ಶನ್, ಶ್ರೀಮಂತ, ವೆಂಕಟೇಶ್ ಜಮಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.



